ಸಂತೋಷ್‌ ಟ್ರೋಫಿ ಫುಟ್ಬಾಲ್‌: ರಾಜ್ಯದ ಕ್ವಾರ್ಟರ್‌ ಫೈನಲ್‌ ಕನಸು ಭಗ್ನ!

| Published : Mar 01 2024, 02:21 AM IST

ಸಾರಾಂಶ

ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಕರ್ನಾಟಕ ತಂಡಕ್ಕೆ ಮರೀಚಿಕೆಯಾದ ಜಯ. ರೈಲ್ವೇಸ್‌ ವಿರುದ್ಧ 0-1 ಗೋಲಿನ ಸೋಲು. ಕ್ವಾರ್ಟರ್‌ ಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದ ಹಾಲಿ ಚಾಂಪಿಯನ್‌ ತಂಡ.

ಯೂಪಿಯಾ (ಅರುಣಾಚಲಪ್ರದೇಶ): 77ನೇ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಹಾಲಿ ಚಾಂಪಿಯನ್‌ ಕರ್ನಾಟಕದ ಕನಸು ಬಹುತೇಕ ಭಗ್ನಗೊಂಡಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಪರಾಭವಗೊಂಡ ಕರ್ನಾಟಕ ತಂಡ ಭಾರಿ ನಿರಾಸೆ ಅನುಭವಿಸಿದೆ.

ಗುರುವಾರ ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಕರ್ನಾಟಕಕ್ಕೆ 0-1 ಸೋಲು ಎದುರಾಯಿತು. 53ನೇ ನಿಮಿಷದಲ್ಲಿ ಸುಬ್ರತಾ ಮುರ್ಮು ಬಾರಿಸಿದ ಗೋಲು, ರೈಲ್ವೇಸ್‌ ಪಾಲಿಗೆ ಗೆಲುವಿನ ಗೋಲಾಯಿತು.

ರಾಜ್ಯ ತಂಡಕ್ಕೆ ಸತತ 2ನೇ ಸೋಲು ಎದುರಾಗಿದ್ದು, 4 ಪಂದ್ಯಗಳಲ್ಲಿ 2 ಸೋಲು, 2 ಡ್ರಾದೊಂದಿಗೆ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲೇ ಬಾಕಿಯಾಗಿದೆ.

ಫೈನಲ್‌ ಸುತ್ತಿನ ಗುಂಪು ಹಂತದಲ್ಲಿ ರಾಜ್ಯಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಶನಿವಾರ ಮಹಾರಾಷ್ಟ್ರ ಸವಾಲು ಎದುರಾಗಲಿದೆ.

ಕಳೆದ ವರ್ಷ ಚಾಂಪಿಯನ್‌ ಪಟ್ಟಕ್ಕೇರಿದ್ದ ಕರ್ನಾಟಕದಿಂದ ಈ ಬಾರಿ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅಟ್ಯಾಕ್‌ ಹಾಗೂ ಡಿಫೆನ್ಸ್‌ ಎರಡರಲ್ಲೂ ರಾಜ್ಯ ತಂಡದ ಆಟ ಸಪ್ಪೆ ಎನಿಸುತ್ತಿದೆ. ಕೆಲ ಪ್ರಮುಖ ಆಟಗಾರರ ಅನುಪಸ್ಥಿತಿಯೂ ರಾಜ್ಯ ತಂಡವನ್ನು ಬಲವಾಗಿ ಕಾಡುತ್ತಿದೆ.