ಬೆಂಗಳೂರು: 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಪ್ರಾಯೋಜಕತ್ವ ನೀಡಲಿದೆ. ಆರ್‌ಸಿಬಿಗೆ 1 ವರ್ಷಕ್ಕೆ 4.8 ಕೋಟಿ ರು. ಪಾವತಿಸಲು ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
‘ನಂದಿನಿ’ ಉತ್ಪನ್ನಗಳ ಪ್ರಚಾರಕ್ಕೆ ಆರ್‌ಸಿಬಿಯ ದಿಗ್ಗಜ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಹಾಗೂ ಕರ್ನಾಟಕ ರಣಜಿ ತಂಡದ ನಾಯಕ ದೇವ್‌ದತ್ ಪಡಿಕ್ಕಲ್‌ರನ್ನು ಕೆಎಂಎಫ್‌ನ ಬಳಸಿಕೊಳ್ಳುತ್ತದೆ ಎಂದು ಗೊತ್ತಾಗಿದೆ. ನಂದಿನಿ ಉತ್ಪನ್ನಗಳ ಕವರ್ ಮೇಲೆ ಈ ಮೂವರ ಭಾವಚಿತ್ರಗಳು ಸಹ ಇರಲಿವೆ.
ತಂಡದ ಅಸಂಖ್ಯ ಅಭಿಮಾನಿಗಳನ್ನು ತಲುಪಲು
ಒಪ್ಪಂದ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, ‘ಕೆಎಂಎಫ್ ಹಾಗೂ ಆರ್‌ಸಿಬಿ ಎರಡೂ ಕರ್ನಾಟಕದಲ್ಲಿ ಬೇರೂರಿರುವ ರಾಷ್ಟ್ರೀಯ ಬ್ರ್ಯಾಂಡ್‌ಗಳು. ಆರ್‌ಸಿಬಿ ಜೊತೆಗಿನ ಸಂಬಂಧದೊಂದಿಗೆ ತಂಡದ ಅಸಂಖ್ಯ ಅಭಿಮಾನಿಗಳನ್ನು ತಲುಪಲು ನಾವು ಇಚ್ಛಿಸುತ್ತೇವೆ’ ಎಂದಿದ್ದಾರೆ.
ಮೃತ 11 ಅಭಿಮಾನಿಗಳ ನೆನಪಲ್ಲಿ ಆಸನ ಖಾಲಿ ಬಿಡಲು ನಿರ್ಧಾರ
ಬೆಂಗಳೂರು : 2025ರ ಜೂ.4ರಂದು ನಡೆದ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ನೆನಪಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಪಂದ್ಯಗಳ ವೇಳೆ 11 ಆಸನಗಳನ್ನು ಶಾಶ್ವತವಾಗಿ ಖಾಲಿ ಬಿಡಲು ಆರ್‌ಸಿಬಿ ನಿರ್ಧರಿಸಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಫ್ರಾಂಚೈಸಿಯ ಸಿಇಒ ರಾಜೇಶ್ ಮೆನನ್ ಈ ವಿಚಾರ ತಿಳಿಸಿದರು.
ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ 11 ಜನರ ಹೆಸರುಗಳನ್ನು ಒಳಗೊಂಡ ಫಲಕವನ್ನೂ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಪಂದ್ಯದ ದಿನ ಅಭ್ಯಾಸ ನಡೆಸುವಾಗ ತಂಡದ ಎಲ್ಲಾ ಆಟಗಾರರು ‘11’ರ ಸಂಖ್ಯೆಯುಳ್ಳ ಜೆರ್ಸಿಯನ್ನು ತೊಡುವುದಾಗಿಯೂ ಮೆನನ್ ತಿಳಿಸಿದರು.
