ಸಾರಾಂಶ
ಬೆಂಗಳೂರು : ಕರ್ನಾಟಕ ಮತ್ತು ಭಾರತದಲ್ಲಿ ಪಿಕಲ್‌ಬಾಲ್ ಕ್ರೀಡೆಯ ಅಭಿವೃದ್ಧಿಗಾಗಿ ಗುರುವಾರ ಬೆಂಗಳೂರಿನಲ್ಲಿ ನಡೆದ ಪಿಕಲ್‌ಬಾಲ್ ಸಮ್ಮಿಟ್‌ನಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾ ತಂತ್ರಜ್ಞಾನ ಸಂಸ್ಥಾಪಕರು, ಉದ್ಯಮಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಶೃಂಗಸಭೆಯು ರಾಷ್ಟ್ರವ್ಯಾಪಿ ಪಿಕಲ್‌ಬಾಲ್‌ನ ಚಿತ್ರಣ ಬದಲಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.
2026ರ ವೇಳೆಗೆ 100ಕ್ಕೂ ಹೆಚ್ಚು ಪಿಕಲ್‌ಬಾಲ್ ಅಂಕಣ, ಯುವ ಪ್ರತಿಭೆಗಳನ್ನು ಗುರುತಿಸಲು ಶಾಲೆ-ಕಾಲೇಜು ಮಟ್ಟದಲ್ಲೇ ಪ್ರತಿಭಾನ್ವೇಷಣೆ, ರಾಜ್ಯ ಮಟ್ಟದಲ್ಲಿ ನಿರಂತರವಾಗಿ ಲೀಗ್ ಆಯೋಜನೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲದೆ, ದೇಶದಲ್ಲಿ ಪಿಕಲ್‌ಬಾಲ್ ಕ್ರೀಡೆಯನ್ನು ಹೇಗೆ ಯಶಸ್ವಿಯಾಗಿಸಬಹುದು ಎಂಬುದರ ಕುರಿತು ತಜ್ಞರು ಸುದೀರ್ಘ ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಂಡರು.ಸಮಾರಂಭದಲ್ಲಿ ರಾಜ್ಯ ಪಿಕಲ್‌ಬಾಲ್ ಸಂಸ್ಥೆ ಅಧ್ಯಕ್ಷ ಶ್ರೀ ಹರ್ಷ, ಭಾರತ ಪಿಕಲ್‌ಬಾಲ್ ಸಂಸ್ಥೆ ಅಧ್ಯಕ್ಷ ಸೂರ್ಯವೀರ್ ಸಿಂಗ್, ಅಂ.ರಾ. ಪಿಕಲ್‌ಬಾಲ್ ಆಟಗಾರ, ಕೋಚ್ ಅತುಲ್ ಎಡ್ವರ್ಡ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.
ಪಿಕಲ್‌ಬಾಲ್ ಎಂದರೇನು?
ಪಿಕಲ್‌ಬಾಲ್ ಎಂಬುದು ಟೆನಿಸ್, ಬ್ಯಾಡ್ಮಿಂಟನ್‌ನ ಮಿಶ್ರ ರೂಪ. ಈ ಆಟವನ್ನು ಸಣ್ಣ ಸಣ್ಣ ರಂಧ್ರಗಳಿರುವ ಪ್ಲಾಸ್ಟಿಕ್ ಬಾಲ್ ಮತ್ತು ರಾಕೆಟ್‌ನ ಸಹಾಯದಿಂದ ಆಡಲಾಗುತ್ತದೆ. ಹಾಗೆಯೇ ಈ ಆಟವನ್ನು 44*20 ಚದರ ಅಡಿಗಳ ಅಂಕಣದಲ್ಲಿ ಆಡಲಾಗುತ್ತದೆ. ಈ ಆಟದಲ್ಲಿ ಟೆನಿಸ್ನಂತೆ ಸಿಂಗಲ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಕೂಡ ಇರುತ್ತದೆ.