ಭಾರತ ಟಿ20 ತಂಡಕ್ಕೆ ಕನ್ನಡಿಗ ವೈಶಾಖ್‌ ! ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ

| Published : Oct 26 2024, 12:49 AM IST / Updated: Oct 26 2024, 05:13 AM IST

ಸಾರಾಂಶ

ಮೊದಲ ಬಾರಿಗೆ ವೈಶಾಖ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ. ದಕ್ಷಿಣ ಆಫ್ರಿಕಾ ವಿರುದ್ಧ ನ.8ರಿಂದ ಆರಂಭಗೊಳ್ಳಲಿರುವ 4 ಪಂದ್ಯಗಳ ಟಿ20 ಸರಣಿ. ನ.22ರಿಂದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿ ಶುರು.

ನವದೆಹಲಿ: ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಸರಣಿ ಹಾಗೂ ಆ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 5 ಪಂದ್ಯಗಳ ಮಹತ್ವದ ಟೆಸ್ಟ್‌ ಸರಣಿಗೆ ಶುಕ್ರವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತು. ಕರ್ನಾಟಕದ ವೇಗದ ಬೌಲರ್‌ ವೈಶಾಖ್ ವಿಜಯ್‌ ಕುಮಾರ್‌ಗೆ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಅವರು ನ.8ರಿಂದ ದ.ಆಫ್ರಿಕಾ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.

ಇದೇ ವೇಳೆ ನ.22ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್‌ ಸರಣಿಗೆ ಕರ್ನಾಟಕದ ಕೆ.ಎಲ್‌.ರಾಹುಲ್‌ ಹಾಗೂ ಪ್ರಸಿದ್ಧ್‌ ಕೃಷ್ಣ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಡೆಲ್ಲಿಯ ವೇಗಿ ಹರ್ಷಿತ್‌ ರಾಣಾ, ಆಂಧ್ರ ಪ್ರದೇಶದ ಆಲ್ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಕ್ಕಿದೆ.

ಟೆಸ್ಟ್‌ ತಂಡದಲ್ಲಿ ಮೀಸಲು ಆರಂಭಿಕನಾಗಿ ಅಭಿಮನ್ಯು ಈಶ್ವರನ್‌ ಸ್ಥಾನ ಪಡೆದಿದ್ದಾರೆ. ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಅಕ್ಷರ್ ಪಟೇಲ್‌ರನ್ನು ತಂಡದಿಂದ ಕೈಬಿಡಲಾಗಿದ್ದು, ಗಾಯಗೊಂಡಿರುವ ಕುಲ್ದೀಪ್‌ ಯಾದವ್‌ ಟೆಸ್ಟ್‌ ಸರಣಿಗೆ ಗೈರಾಗಲಿದ್ದಾರೆ. ಹಿರಿಯ ವೇಗಿ ಮೊಹಮದ್‌ ಶಮಿಯನ್ನೂ ಆಯ್ಕೆಗೆ ಪರಿಗಣಿಸಿಲ್ಲ.

ಇನ್ನು ಯುವ ವೇಗಿ ಮಯಾಂಕ್‌ ಯಾದವ್‌, ರಿಯಾನ್‌ ಪರಾಗ್‌ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಈ ಕಾರಣಕ್ಕೆ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. 

ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ತಂಡ: ಸೂರ್ಯಕುಮಾರ್‌ (ನಾಯಕ), ಅಭಿಷೇಕ್‌ ಶರ್ಮಾ, ಸ್ಯಾಮ್ಸನ್‌, ರಿಂಕು ಸಿಂಗ್‌, ತಿಲಕ್‌ ವರ್ಮಾ, ಜಿತೇಶ್ ಶರ್ಮಾ, ಹಾರ್ದಿಕ್‌, ಅಕ್ಷರ್‌, ರಮಣ್‌ದೀಪ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌, ಅರ್ಶ್‌ದೀಪ್‌, ವೈಶಾಖ್‌ ವಿಜಯ್‌ಕುಮಾರ್‌, ಆವೇಶ್‌ ಖಾನ್‌, ಯಶ್‌ ದಯಾಳ್‌. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಗೆ ತಂಡ: ರೋಹಿತ್‌ (ನಾಯಕ), ಬೂಮ್ರಾ (ಉಪನಾಯಕ), ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌, ಧೃವ್‌ ಜುರೆಲ್‌, ಆರ್.ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮದ್‌ ಸಿರಾಜ್‌, ಆಕಾಶ್‌ದೀಪ್‌, ಪ್ರಸಿದ್ಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.