ಬೆಂಗಳೂರು : ಇನ್ಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲ ಪಂದ್ಯ ಹಾಗೂ ಕಾರ್ಯಕ್ರಮಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಧಾನ ಆಯೋಜಕ ಆಗಿರಲಿದೆ ಎಂದು ಆರ್‌ಸಿಬಿ ಸಿಇಒ ರಾಜೇಶ್‌ ಮೆನನ್‌ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಸಿಸಿಐ, ಕೆಎಸ್‌ಸಿಎ ಹಾಗೂ ಆರ್‌ಸಿಬಿ ನಡುವಿನ ಒಪ್ಪಂದ ಪ್ರಕಾರ, ಇನ್ಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಎಲ್ಲ ಪಂದ್ಯ ಹಾಗೂ ಕಾರ್ಯಕ್ರಮಗಳಿಗೆ ರಾಜ್ಯ ಕ್ರಿಕೆಟ್‌ ಸಂಸ್ಥೆಯೇ ಪ್ರಧಾನ ಆಯೋಜಕ ಆಗಿರಲಿದೆ. ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಕ್ರಮ ಸೇರಿ ಎಲ್ಲ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಕೆಎಸ್‌ಸಿಎ ಜೊತೆ ನಾವು ಕೆಲಸ ಮಾಡಲಿದ್ದೇವೆ. ವಿಕ್ಟರಿ ಪರೇಡ್‌ಗೆ ಪ್ರತ್ಯೇಕ ಮಾರ್ಗಸೂಚಿ ರಚಿಸಲಾಗಿದೆ’ ಎಂದರು.

ಈ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯ ಅಥವಾ ಕಾರ್ಯಕ್ರಮ ಆಯೋಜನೆಯ ಹೊಣೆ ಫ್ರಾಂಚೈಸಿ ಒಂದರದ್ದೇ ಆಗಿರುತ್ತಿತ್ತು. ಕೆಎಸ್‌ಸಿಎ ಕೇವಲ ಕ್ರೀಡಾಂಗಣವನ್ನು ಬಾಡಿಗೆಗೆ ನೀಡುತ್ತಿತ್ತು.

ಸುರಕ್ಷತೆ ಹೆಚ್ಚಿಸಲು 7 ಕೋಟಿ ವೆಚ್ಚ

ಕಳೆದ ವರ್ಷದ ಕಾಲ್ತುಳಿತ ಘಟನೆ ಬಳಿಕ ಕ್ರೀಡಾಂಗಣದಲ್ಲಿ ಭದ್ರತೆ ಹಾಗೂ ಪ್ರೇಕ್ಷಕರ ಸುರಕ್ಷತೆಗೆ ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದೇವೆ. ಕರ್ನಾಟಕ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದ ರಾಜೇಶ್‌ ಮೆನನ್‌, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆ ಹಾಗೂ ಸುರಕ್ಷತೆ ಹೆಚ್ಚಿಸಲು ಆರ್‌ಸಿಬಿ 7 ಕೋಟಿ ರು. ವೆಚ್ಚದಲ್ಲಿ ಎಐ ಆಧಾರಿತ ಸಿಸಿ ಕ್ಯಾಮೆರಾಗಳು, ಬ್ಯಾಗ್‌ ಸ್ಕ್ಯಾನರ್‌ಗಳನ್ನು ಅಳವಡಿಸಿದ್ದೇವೆ ಎಂದರು.


ಕ್ಯಾಮೆರಾಗಳನ್ನು ಅಳವಡಿಸಿ 

ಈ ಮೊದಲಿದ್ದ 120-130 ಕ್ಯಾಮೆರಾಗಳ ಜೊತೆಗೆ ಆರ್‌ಸಿಬಿ, ಕ್ರೀಡಾಂಗಣದ ಸುತ್ತ, ಒಳಗೆ 350 ಹೊಸ ಕ್ಯಾಮೆರಾಗಳನ್ನು ಅಳವಡಿಸಿದೆ. ಸ್ಟೇಡಿಯಂನ ಯಾವುದೇ ಗೇಟ್‌ ಬಳಿ ಜನದಟ್ಟಣೆ ಹೆಚ್ಚಾಗುತ್ತಿದೆ ಎನಿಸಿದರೆ ಈ ಕ್ಯಾಮೆರಾಗಳು ಸಂದೇಶ ರವಾನಿಸುತ್ತವೆ. ಸಿಸಿಟೀವಿ ದೃಶ್ಯಗಳು ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲೂ ನೇರ ಪ್ರಸಾರಗೊಳ್ಳಲಿದೆ. ಹೀಗಾಗಿ ಪೊಲೀಸರಿಗೂ ಕ್ಷಣ ಕ್ಷಣದ ಮಾಹಿತಿ ಸಿಗಲಿದೆ ಎಂದರು.

ಜನದಟ್ಟಣೆ ತಡೆಯಲು ಪಂದ್ಯ ಆರಂಭಗೊಳ್ಳುವ 4 ಗಂಟೆಗೂ ಮೊದಲೇ ಕ್ರೀಡಾಂಗಣದ ದ್ವಾರಗಳನ್ನು ತೆರೆಯಲಾಗುತ್ತದೆ. ಪ್ರೇಕ್ಷಕರು ಕ್ರೀಡಾಂಗಣದೊಳಕ್ಕೆ ಪ್ರವೇಶಿಸಲು ಸಾಕಷ್ಟು ಕಾಲಾವಕಾಶ ಸಿಗಲಿದೆ ಎಂದು ಮೆನನ್‌ ಹೇಳಿದರು.