ಸಾರಾಂಶ
ಪಾಟ್ನಾ: 2024-25ರ ರಣಜಿ ಟ್ರೋಫಿಯಲ್ಲಿ ಮೊದಲೆರಡು ಪಂದ್ಯಗಳಿಗೆ ಮಳೆ ಅಡ್ಡಿಯಾಗಿ, ಡ್ರಾಗೆ ತೃಪ್ತಿಪಟ್ಟಿದ್ದ ಕರ್ನಾಟಕ, ಶನಿವಾರದಿಂದ ಆರಂಭಗೊಳ್ಳಲಿರುವ ಬಿಹಾರ ವಿರುದ್ಧದ ಪಂದ್ಯದಲ್ಲಿ ಗೆದ್ದು, ಈ ಋತುವಿನಲ್ಲಿ ಮೊದಲ ಜಯ ದಾಖಲಿಸಲು ಎದುರು ನೋಡುತ್ತಿದೆ.
ಎರಡೂ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಸಹ ಮುಗಿಯದ ಕಾರಣ, ತಲಾ 1 ಅಂಕ ಪಡೆದಿದ್ದ ಕರ್ನಾಟಕ, 2 ಪಂದ್ಯಗಳಿಂದ ಕೇವಲ 2 ಅಂಕ ಗಳಿಸಿ ಎಲೈಟ್ ‘ಸಿ’ ಗುಂಪಿನಲ್ಲಿ 6ನೇ ಸ್ಥಾನದಲ್ಲಿದೆ. ತಂಡ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಬೇಕಿದ್ದರೆ, ಬಾಕಿ ಇರುವ 5 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆಲ್ಲಬೇಕಿದೆ.
ತಂಡಕ್ಕೆ ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್‌ರಂತಹ ಹಿರಿಯ ಆಟಗಾರರ ಬಲವಿದೆ. ವಾಸುಕಿ ಕೌಶಿಕ್, ವೈಶಾಖ್ ವಿಜಯ್‌ಕುಮಾರ್ ವೇಗದ ಬೌಲಿಂಗ್ ಪಡೆ ಮುನ್ನಡೆಸಲಿದ್ದಾರೆ. ನಿಕಿನ್ ಜೋಸ್, ಆರ್.ಸ್ಮರಣ್, ಸುಜಯ್ ಸಾತೇರಿ, ಹಾರ್ದಿಕ್ ರಾಜ್‌ರಂತಹ ಯುವ ಪ್ರತಿಭೆಗಳು ಸಹ ತಂಡದಲ್ಲಿದ್ದು, ನಿರೀಕ್ಷೆ ಮೂಡಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಕರ್ನಾಟಕದ ಬೌಲಿಂಗ್ ದಾಳಿ ನಿರೀಕ್ಷಿತ ಮಟ್ಟದಲ್ಲಿ ಕಂಡು ಬಂದಿರಲಿಲ್ಲ. ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ರಾಜ್ಯದ ಬೌಲರ್‌ಗಳು ಎದುರು ನೋಡುತ್ತಿದ್ದಾರೆ.
ಬಿಹಾರ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಅಷ್ಟೇನೂ ಬಲಿಷ್ಠವಾಗಿಲ್ಲ. ಹೀಗಾಗಿ, ಕರ್ನಾಟಕ ಈ ಪಂದ್ಯದಲ್ಲಿ ಬೋನಸ್ ಅಂಕದೊಂದಿಗೆ ಗೆಲುವು ಸಾಧಿಸುವ ಗುರಿ ಹೊಂದಿದೆ. ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ