ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿ : ಕೊನೆಯ ಪಂದ್ಯದಲ್ಲಿ ಇಂದು ಕರ್ನಾಟಕ vs ನಾಗಾಲ್ಯಾಂಡ್‌

| Published : Jan 05 2025, 01:31 AM IST / Updated: Jan 05 2025, 05:37 AM IST

ಸಾರಾಂಶ

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕಕ್ಕೆ ನಾಗಾಲ್ಯಾಂಡ್‌ ಎದುರಾಳಿ. ದೊಡ್ಡ ಗೆಲುವಿನೊಂದಿಗೆ ನೇರವಾಗಿ ಕ್ವಾರ್ಟರ್‌ ಫೈನಲ್‌ ಹಂತ ಪ್ರವೇಶಿಸಲು ಕರ್ನಾಟಕ ಕಾತರ.

ಅಹಮದಾಬಾದ್‌: ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಕರ್ನಾಟಕ, ‘ಸಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾನುವಾರ ನಾಗಾಲ್ಯಾಂಡ್‌ ವಿರುದ್ಧ ಸೆಣಸಲಿದೆ. ಸದ್ಯ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ, ಈ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ.

ನಾಯಕ ಮಯಾಂಕ್‌ ಅಗರ್‌ವಾಲ್‌ ಅತ್ಯುತ್ತಮ ಲಯದಲ್ಲಿದ್ದು, ವೇಗಿ ವಾಸುಕಿ ಕೌಶಿಕ್‌ ಸಹ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಈ ಇಬ್ಬರು ನಾಕೌಟ್‌ ಪ್ರವೇಶಕ್ಕೂ ಮೊದಲು ಮತ್ತೊಮ್ಮೆ ಮಿಂಚಲು ಕಾತರಿಸುತ್ತಿದ್ದಾರೆ. ಆರ್‌.ಸ್ಮರಣ್‌, ನಿಕಿನ್‌ ಜೋಸ್‌, ಕೆ.ವಿ.ಅನೀಶ್‌, ಕೆ.ಎಲ್‌.ಶ್ರೀಜಿತ್‌ ಈ ಪಂದ್ಯವನ್ನು ಬ್ಯಾಟಿಂಗ್‌ ಅಭ್ಯಾಸಕ್ಕೆ ಬಳಸಿಕೊಳ್ಳಲು ಕಾಯುತ್ತಿದ್ದಾರೆ. ತಾರಾ ಸ್ಪಿನ್ನರ್‌ ಶ್ರೇಯಸ್ ಗೋಪಾಲ್‌ ಸಹ ನಾಕೌಟ್‌ಗೂ ಮೊದಲು ಸ್ಥಿರತೆ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ನಾಗಾಲ್ಯಾಂಡ್‌ ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದೆ.

ಇದೇ ವೇಳೆ ಭಾನುವಾರ ಮತ್ತೊಂದು ಪಂದ್ಯದಲ್ಲಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್‌ಗೆ ಪುದುಚೇರಿ ಎದುರಾಗಲಿದೆ. ಕರ್ನಾಟಕ ದೊಡ್ಡ ಗೆಲುವು ಸಂಪಾದಿಸಿದರೆ, ನೆಟ್‌ ರನ್‌ರೇಟ್‌ ಆಧಾರದಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಸಿಗಬಹುದು.ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ