ಸಿ.ಕೆ.ನಾಯ್ಡು ಟ್ರೋಫಿ ಫೈನಲ್‌: ಯುಪಿ ವಿರುದ್ಧ ಕರ್ನಾಟಕಕ್ಕೆ ಬೃಹತ್‌ ಲೀಡ್‌

| Published : Mar 12 2024, 02:02 AM IST

ಸಾರಾಂಶ

ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಗಾಕಿದ್ದು 139 ರನ್‌ ಮಾತ್ರ. ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯ ತಂಡ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 91 ರನ್‌ ಗಳಿಸಿದ್ದು, 310 ರನ್‌ ಮುನ್ನಡೆಯಲ್ಲಿದೆ.

ಬೆಂಗಳೂರು: ಸಿ.ಕೆ.ನಾಯ್ಡು ಟ್ರೋಫಿ ಅಂಡರ್‌-23 ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧ ಬೃಹತ್‌ ಮುನ್ನಡೆ ಸಾಧಿಸಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜ್ಯ ತಂಡ ಸದ್ಯ 310 ರನ್‌ ಮುನ್ನಡೆಯಲ್ಲಿದ್ದು, ತಂಡದ ಗೆಲುವಿನ ಆಸೆ ಚಿಗುರೊಡೆದಿದೆ.ಕರ್ನಾಟಕದ 358 ರನ್‌ಗೆ ಉತ್ತರವಾಗಿ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 139ಕ್ಕೆ ಸರ್ವಪತನ ಕಂಡಿತು. ಆರಾಧ್ಯ ಯಾದವ್‌ ಏಕಾಂಗಿ ಹೋರಾಟ ನಡೆಸಿ 66 ರನ್‌ ಗಳಿಸಿದರೆ ಇತರರು ವಿಫಲರಾದರು. ರಾಜ್ಯದ ಪರಾಸ್‌ ಆರ್ಯ 35 ರನ್‌ಗೆ 5 ವಿಕೆಟ್‌ ಕಬಳಿಸಿದರೆ ಮೆಕ್‌ನೀಲ್‌ ಹಾಗೂ ಮೊಹ್ಸಿನ್‌ ಖಾನ್‌ ತಲಾ 2 ವಿಕೆಟ್‌ ಪಡೆದರು.219 ರನ್‌ಗಳ ದೊಡ್ಡ ಮುನ್ನಡೆ ಪಡೆದ ಕರ್ನಾಟಕ ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 91 ರನ್ ಗಳಿಸಿದೆ. ಪ್ರಖರ್‌ ಚತುರ್ವೇದಿ ಔಟಾಗದೆ 55, ಮೆಕ್‌ನೀಲ್‌ ಔಟಾಗದೆ 33 ರನ್‌ ಗಳಿಸಿ ರಾಜ್ಯ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟರು. ಮತ್ತಷ್ಟು ರನ್ ಸೇರಿಸಿ ಉತ್ತರ ಪ್ರದೇಶಕ್ಕೆ ದೊಡ್ಡ ಗುರಿ ನೀಡಿ ಪಂದ್ಯ ಗೆಲ್ಲಲು ರಾಜ್ಯ ತಂಡ ಕಾಯುತ್ತಿದೆ.ಸ್ಕೋರ್‌: ಕರ್ನಾಟಕ 358/10 ಮತ್ತು 91/0(2ನೇ ದಿನದಂತ್ಯಕ್ಕೆ) (ಪ್ರಖರ್‌ 55*, ಮೆಕ್‌ನೀಲ್‌ 33*), ಉತ್ತರ ಪ್ರದೇಶ 139/10(ಆರಾಧ್ಯ 66, ಪರಾಸ್‌ 5-35)