ರಣಜಿಯಲ್ಲಿ ಕೊನೆಗೂ ಕರ್ನಾಟಕಕ್ಕೆ ಸಿಕ್ತು ಗೆಲುವು : ಬಿಹಾರ ವಿರುದ್ಧ 8 ವಿಕೆಟ್‌ ಜಯಭೇರಿ

| Published : Oct 30 2024, 12:43 AM IST / Updated: Oct 30 2024, 04:09 AM IST

ಸಾರಾಂಶ

3 ಪಂದ್ಯಗಳಲ್ಲಿ ಮೊದಲ ಗೆಲುವು. ಮೊದಲೆರಡು ಪಂದ್ಯ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ. ನ.6ರಿಂದ ಬೆಂಗ್ಳೂರಲ್ಲಿ ಕರ್ನಾಟಕ vs ಬೆಂಗಾಲ್‌ ಪಂದ್ಯ.

ಪಾಟ್ನಾ: ಎಂಟು ಬಾರಿ ಚಾಂಪಿಯನ್‌ ಕರ್ನಾಟಕ ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮೊದಲ ಗೆಲುವಿನ ಸಿಹಿ ಅನುಭವಿಸಿದೆ. ಮಂಗಳವಾರ ಕೊನೆಗೊಂಡ ಬಿಹಾರ ವಿರುದ್ಧದ ಮಹತ್ವದ ಪಂದ್ಯದಲ್ಲಿ ರಾಜ್ಯ ತಂಡಕ್ಕೆ 8 ವಿಕೆಟ್‌ ಗೆಲುವು ಲಭಿಸಿತು. ಗೆಲುವಿಗೆ 69 ರನ್‌ ಗುರಿ ಪಡೆದಿದ್ದ ತಂಡ ಸುಲಭದಲ್ಲಿ ಗೆಲುವು ಒಲಿಸಿಕೊಂಡಿತು. ಈ ಮೂಲಕ 2024-25ರ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ನಾಕೌಟ್‌ಗೇರುವ ಕನಸು ಜೀವಂತವಾಗಿರಿಸಿಕೊಂಡಿದೆ. 

ತಂಡ 3 ಪಂದ್ಯಗಳಲ್ಲಿ 8 ಅಂಕ ಗಳಿಸಿ, ಎಲೈಟ್‌ ‘ಸಿ’ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದೆ.ಆತಿಥೇಯ ಬಿಹಾರ ಮೊದಲ ದಿನವೇ 143ಕ್ಕೆ ಆಲೌಟಾಗಿತ್ತು. 2ನೇ ದಿನದಾಟ ಮಳೆಗೆ ಆಹುತಿಯಾಗಿದ್ದರೆ, 3ನೇ ದಿನವಾದ ಸೋಮವಾರ ಪಂದ್ಯದ ಮೇಲೆ ಕರ್ನಾಟಕ ಹಿಡಿತ ಸಾಧಿಸಿತ್ತು. ದಿನದಂತ್ಯಕ್ಕೆ 7 ವಿಕೆಟ್‌ಗೆ 287 ರನ್‌ ಕಲೆಹಾಕಿದ್ದ ತಂಡ ಕೊನೆ ದಿನವಾದ ಮಂಗಳವಾರ ಮತ್ತೆ ಬ್ಯಾಟ್‌ ಮಾಡಲಿಲ್ಲ. ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿತು.

144 ರನ್‌ಗಳ ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಬಿಹಾರ ಶಕೀಬುಲ್‌ ಘನಿ(130) ಹೋರಾಟದ ಶತಕದ ಹೊರತಾಗಿಯೂ 212 ರನ್‌ಗೆ ಆಲೌಟಾಯಿತು. ಬಾಬುಲ್‌ ಕುಮಾರ್‌ 44 ರನ್‌ ಗಳಿಸಿದ್ದು ಬಿಟ್ಟರೆ ಇತರರು ಕರ್ನಾಟಕ ಬೌಲರ್‌ಗಳ ಮುಂದೆ ನಿರುತ್ತರರಾದರು. ರಾಜ್ಯ ತಂಡದ ಪರ ಶ್ರೇಯಸ್‌ ಗೋಪಲಾ್‌ 4, ವಿಜಯ್‌ಕುಮಾರ್‌ ವೈಶಾಖ್‌ 3 ವಿಕೆಟ್‌ ಪಡೆದರು.

ಸುಲಭ ಜಯ: ಸುಲಭ ಗುರಿ ಪಡೆದ ಕರ್ನಾಟಕ 10.1 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ನಾಯಕ ಮಯಾಂಕ್‌ ಅಗರ್‌ವಾಲ್‌(9), ಸ್ಮರಣ್(15) ಬೇಗನೇ ಔಟಾದರೂ, ನಿಕಿನ್‌ ಜೋಸ್‌(ಔಟಾಗದೆ 28) ಹಾಗೂ ಅಭಿನವ್‌ ಮನೋಹರ್(ಔಟಾಗದೆ 17) ತಂಡವನ್ನು ಗೆಲ್ಲಿಸಿದರು.ಸ್ಕೋರ್‌: ಬಿಹಾರ 143/10 ಮತ್ತು 212/10 (ಘನಿ 130, ಬಾಬುಲ್‌ 44, ಶ್ರೇಯಸ್‌ 4-70, ವೈಶಾಖ್‌ 3-44), ಕರ್ನಾಟಕ 287/7 ಡಿ. ಮತ್ತು 70/2 (ನಿಕಿನ್‌ 28 , ಅಭಿನವ್‌ 17 , ಹಿಮಾನ್ಶು 1-16) ಪಂದ್ಯಶ್ರೇಷ್ಠ: ಶಕೀಬುಲ್‌ ಘನಿ.

ನ.6ರಿಂದ ಬೆಂಗ್ಳೂರಲ್ಲಿ ಕರ್ನಾಟಕ vs ಬೆಂಗಾಲ್‌

ಕರ್ನಾಟಕ ತಂಡ ಈ ಬಾರಿ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ನ.6ರಿಂದ ಬೆಂಗಾಲ್‌ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬೆಂಗಾಲ್‌ ಈ ಬಾರಿ ಆಡಿದ 3 ಪಂದ್ಯಗಳಲ್ಲಿ 5 ಅಂಕ ಗಳಿಸಿದೆ. 2 ಪಂದ್ಯ ಡ್ರಾಗೊಂಡಿದ್ದರೆ, ಮತ್ತೊಂದು ಪಂದ್ಯ ರದ್ದಾಗಿದೆ. 

68 ಎಸೆತಕ್ಕೆ 100: ರಣಜಿಯಲ್ಲಿ ರಜತ್‌ 5ನೇ ವೇಗದ ಶತಕ

ಹರ್ಯಾಣ ವಿರುದ್ಧ ಪಂದ್ಯದಲ್ಲಿ ಮಧ್ಯಪ್ರದೇಶದ ರಜತ್‌ ಪಾಟೀದಾರ್‌ ಕೇವಲ 68 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಇದು ರಣಜಿಯಲ್ಲಿ 5ನೇ ವೇಗದ ಶತಕ. ಈ ಹಿಂದೆ ರಿಷಭ್‌ ಪಂತ್‌ 48, ರಿಯಾನ್‌ ಪರಾಗ್‌ 56, ಆರ್‌.ಕೆ.ಬೋರಾ 56, ರುಬೆನ್‌ ಪಾಲ್‌ 60 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ ರಜತ್‌ 102 ಎಸೆತಗಳಲ್ಲಿ 159 ರನ್‌ ಗಳಿಸಿದರು. ಇದರ ಹೊರತಾಗಿಯೂ ಪಂದ್ಯ ಡ್ರಾಗೊಂಡಿದೆ.

ಡೆಲ್ಲಿ, ವಿದರ್ಭಕ್ಕೆ ಗೆಲುವು

ರಣಜಿತ ಇತರ ಪಂದ್ಯಗಳಲ್ಲಿ ಡೆಲ್ಲಿ, ವಿದರ್ಭ ಗೆಲುವು ಸಾಧಿಸಿವೆ. ಅಸ್ಸಾಂ ವಿರುದ್ಧ ಡೆಲ್ಲಿ 10 ವಿಕೆಟ್‌, ಉತ್ತರಾಖಂಡ ವಿರುದ್ಧ ವಿದರ್ಭ 266 ರನ್‌, ನಾಗಲ್ಯಾಂಡ್‌ ವಿರುದ್ಧ ಗೋವಾ 83 ರನ್‌ಗಳಿಂದ ಜಯಗಳಿಸಿವೆ.