ಕಿರಿಯರ ಅಥ್ಲೆಟಿಕ್ಸ್‌: ಲಾಂಗ್‌ಜಂಪ್‌ನಲ್ಲಿ ಕರ್ನಾಟಕದ ಪಾವನ ಬಂಗಾರದ ಸಾಧನೆ

| Published : Mar 09 2024, 01:32 AM IST

ಸಾರಾಂಶ

ಅದ್ಭುತ ಪ್ರದರ್ಶನ ನೀಡಿದ ಪಾವನ ಚಿನ್ನಕ್ಕೆ ಕೊರಳೊಡ್ಡಿದರೆ ತಮಿಳುನಾಡಿನವರಾದ ಪ್ರತೀಕ್ಷಾ ಹಾಗೂ ಲಕ್ಷನ್ಯ ಕ್ರಮವಾಗಿ ಬೆಳ್ಳಿ, ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಲಖನೌ: 22ನೇ ರಾಷ್ಟ್ರೀಯ ಅಂಡರ್‌-20 ಫೆಡರೇಶನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪಾವನ ನಾಗರಾಜ್‌ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಪಾವನ 6.01 ಮೀ. ದೂರಕ್ಕೆ ಜಿಗಿದು ಅಗ್ರಸ್ಥಾನಿಯಾದರು. ತಮಿಳುನಾಡಿನವರಾದ ಪ್ರತೀಕ್ಷಾ(5.77 ಮೀ.) ಹಾಗೂ ಲಕ್ಷನ್ಯ(5.75 ಮೀ.) ಕ್ರಮವಾಗಿ ಬೆಳ್ಳಿ, ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.ಇಂಡಿಯಾನ ವೆಲ್ಸ್ ಟೆನಿಸ್‌:ನಗಾಲ್‌ಗೆ ಸೋಲು

ಕ್ಯಾಲಿಫೋರ್ನಿಯಾ: ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದ್ದರು. ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲೇ ನಗಾಲ್‌ ಸೋಲನುಭವಿಸಿದ್ದರೂ, ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ ಅಲಭ್ಯತೆ ಕಾರಣದಿಂದಾಗಿ ನಗಾಲ್‌ಗೆ ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.101 ನಗಾಲ್‌ ಅವರು ಕೆನಡಾದ ಮಿಲೊನ್‌ ರಾವೊನಿಕ್‌ ವಿರುದ್ಧ 3-6, 3-6 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು.ಡಬ್ಲ್ಯುಎಫ್ಐ ಕಳುಹಿಸುವ ಹೆಸರು ಮಾತ್ರ ಸ್ವೀಕಾರ

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಕಳುಹಿಸುವ ಕುಸ್ತಿಪಟುಗಳ ಹೆಸರುಗಳನ್ನು ಮಾತ್ರ ಅಂತಾರಾಷ್ಟ್ರೀಯ ಕೂಟಗಳಿಗೆ ಪರಿಗಣಿಸುತ್ತೇವೆ ಎಂದು ಜಾಗತಿಕ ಕುಸ್ತಿ ಸಂಸ್ಥೆ ಶುಕ್ರವಾರ ತಿಳಿಸಿದೆ. ಏಷ್ಯನ್ ಕೂಟ ಹಾಗೂ ಒಲಿಂಪಿಕ್ ಕ್ವಾಲಿಫೈಯರ್‌ಗೆ ಆಯ್ಕೆ ಟ್ರಯಲ್ಸ್‌ ಆಯೋಜಿಸುವುದಿಲ್ಲ ಎಂದು ಗುರವಾರವಷ್ಟೇ ಡಬ್ಲ್ಯುಎಫ್‌ಐ ಡೆಲ್ಲಿ ಹೈಕೋರ್ಟ್‌ಗೆ ತಿಳಿಸಿತ್ತು. ಸ್ವತಂತ್ರ ಸಮಿತಿಯೇ ಟ್ರಯಲ್ಸ್ ಆಯೋಜಿಸಲಿದೆ ಎಂದೂ ಸ್ಪಷ್ಟಪಡಿಸಿತ್ತು. ಈ ನಡುವೆ ಜಾಗತಿಕ ಸಂಸ್ಥೆಯು ಡಬ್ಲ್ಯುಎಫ್‌ಐನ ಹೊರತುಪಡಿಸಿ ಬೇರೆ ಯಾರೇ ಕುಸ್ತಿಪಟುಗಳ ಹೆಸರು ಕಳುಹಿಸಿದರೆ ಸ್ವೀಕರಿಸಲ್ಲ ಎಂದಿದೆ.