ಸಾರಾಂಶ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ 17 ನೇ ಭಾರತೀಯ ಮತ್ತು ಎರಡನೇ ಕರ್ನಾಟಕದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆನ್ನೈ: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನ 3ನೇ ದಿನವಾದ ಶುಕ್ರವಾರ ಕೆ.ಎಲ್.ರಾಹುಲ್ ಹೊಸ ಮೈಲುಗಲ್ಲು ಸಾಧಿಸಿದರು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8000 ರನ್ ಪೂರ್ಣಗೊಳಿಸಿದರು.
ಈ ಸಾಧನೆ ಮಾಡಿದ ಭಾರತದ 17ನೇ ಹಾಗೂ ಕರ್ನಾಟಕದ 2ನೇ ಆಟಗಾರ ಎನಿಸಿಕೊಂಡರು. 200ನೇ ಪಂದ್ಯವಾಡುತ್ತಿರುವ ರಾಹುಲ್ ಸದ್ಯ 8017 ರನ್ ಕಲೆಹಾಕಿದ್ದಾರೆ. ರಾಹುಲ್ ಹೊರತುಪಡಿಸಿ 8000+ ರನ್ ಗಳಿಸಿರುವ ಕರ್ನಾಟಕದ ಮತ್ತೋರ್ವ ಆಟಗಾರ ರಾಹುಲ್ ದ್ರಾವಿಡ್.
ಅವರು ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 504 ಪಂದ್ಯಗಳಲ್ಲಿ 24064 ರನ್ ಗಳಿಸಿದ್ದಾರೆ. ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್(34357), ವಿರಾಟ್ ಕೊಹ್ಲಿ(26965) ಅಗ್ರ 2 ಸ್ಥಾನಗಳಲ್ಲಿದ್ದಾರೆ.
10ನೇ ವೇಗದ 8000 ರನ್
ಕೆ.ಎಲ್.ರಾಹುಲ್ ಭಾರತ ಪರ 228ನೇ ಇನ್ನಿಂಗ್ಸ್‌ನಲ್ಲಿ 8000 ರನ್ ಪೂರ್ಣಗೊಳಿಸಿದರು. ಇದು ಇನ್ನಿಂಗ್ಸ್ ಆಧಾರದಲ್ಲಿ 10ನೇ ವೇಗದ 8000 ರನ್. ಸುನಿಲ್ ಗವಾಸ್ಕರ್ 176 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು.
ಅತಿ ಹೆಚ್ಚು ಶತಕ: ಧೋನಿ ದಾಖಲೆ ಸರಿಗಟ್ಟಿದ ಪಂತ್
ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಷಭ್ ಪಂತ್ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಶುಕ್ರವಾರ 6ನೇ ಶತಕ ಪೂರ್ಣಗೊಳಿಸಿದ್ದು, ಎಂ.ಎಸ್.ಧೋನಿ(6 ಶತಕ) ದಾಖಲೆ ಸರಿಗಟ್ಟಿದ್ದಾರೆ.
ಧೋನಿ 6 ಶತಕಕ್ಕೆ 144 ಇನ್ನಿಂಗ್ಸ್ ತೆಗೆದುಕೊಂಡರೆ, ರಿಷಭ್ ಕೇವಲ 58 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದಾರೆ. 3 ಶತಕ ಬಾರಿಸಿರುವ ವೃದ್ಧಿಮಾನ್ ಸಾಹ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.-