ಸಾರಾಂಶ
ಅಹಮದಾಬಾದ್: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಟೂರ್ನಿಗೆ ಮುನ್ನ ಭಾರತ ತಂಡ ಕೊನೆ ಹಂತದ ಸಿದ್ಧತೆ ಎಂಬಂತೆ ಬುಧವಾರ ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ 2-0 ಅಂತರದಲ್ಲಿ ಸರಣಿ ಗೆದ್ದಿರುವ ರೋಹಿತ್ ಶರ್ಮಾ ಪಡೆ ಸದ್ಯ ಕ್ಲೀನ್‌ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಭಾರತ ಕ್ಲೀನ್‌ಸ್ವೀಪ್‌ಗಿಂತ ಹೆಚ್ಚಾಗಿ ಪ್ರಮುಖ ಆಟಗಾರರ ಲಯದ ಬಗ್ಗೆ ತಲೆಕೆಡಿಸಿಕೊಂಡಿದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮರೆತಂತಿದೆ. ಟೆಸ್ಟ್ ಸರಣಿ ಬಳಿಕ ಏಕದಿನದಲ್ಲೂ ಅವರು ವಿಫಲರಾಗುತ್ತಿರುವುದು, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭಾರತಕ್ಕೆ ಹೆಚ್ಚು ತಲೆನೋವು ತಂದಿದೆ. ಇನ್ನು, ಕೆ.ಎಲ್.ರಾಹುಲ್‌ರನ್ನು ತಂಡ 6ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದು, ಮೊದಲೆರಡೂ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದರು. ರಿಷಭ್ ಪಂತ್ ಕೂಡಾ ವಿಕೆಟ್ ಕೀಪರ್ ಸ್ಥಾನದ ರೇಸ್‌ನಲ್ಲಿರುವುದರಿಂದ ರಾಹುಲ್ ಲಯಕ್ಕೆ ಮರಳಬೇಕಾದ ಒತ್ತಡದಲ್ಲಿದ್ದಾರೆ.ವೇಗಿಗಳ ಚಿಂತೆ: ಭಾರತದ ವೇಗದ ಬೌಲರ್‌ಗಳು ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹಿರಿಯ ವೇಗಿ ಮೊಹಮದ್ ಶಮಿ ದುಬಾರಿಯಾಗುತ್ತಿದ್ದು, ವಿಕೆಟ್ ಕೂಡಾ ಸಿಗುತ್ತಿಲ್ಲ. ಯುವ ವೇಗಿ ಹರ್ಷಿತ್ ರಾಣಾ ಕೂಡಾ ಸುಲಭದಲ್ಲಿ ರನ್ ಬಿಟ್ಟುಕೊಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಎಂದಿನ ಲಯದಲ್ಲಿಲ್ಲ. ಚಾಂಪಿಯನ್ಸ್ ಟ್ರೋಫಿಯ ಕೆಲ ಪಂದ್ಯಗಳಿಗಾದರೂ ಬೂಮ್ರಾ ಅಲಭ್ಯರಾಗಲಿರುವ ಹಿನ್ನೆಲೆಯಲ್ಲಿ ಶಮಿ, ಹಾರ್ದಿಕ್ ಮೇಲೆ ಹೆಚ್ಚಿನ ಒತ್ತಡವಿದೆ. ಇನ್ನು, ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮಿಂಚುತ್ತಿದ್ದು, ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.ಪುಟಿದೇಳುತ್ತಾ ಇಂಗ್ಲೆಂಡ್: ಟಿ20 ಸರಣಿ ಬಳಿಕ ಏಕದಿನ ಸರಣಿಯನ್ನೂ ಕಳೆದುಕೊಂಡಿರುವ ಇಂಗ್ಲೆಂಡ್ ಸದ್ಯ ಕ್ಲೀನ್‌ಸ್ವೀಪ್ ಮುಖಭಂಗ ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ. ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟವಾಡುತ್ತಿದ್ದರೂ, ಬಳಿಕ ದೊಡ್ಡ ಸ್ಕೋರ್ ಗಳಿಸಲು ವಿಫಲವಾಗುತ್ತಿದೆ. ತಂಡದ ಬೌಲರ್‌ಗಳೂ ಲಯ ತಪ್ಪಿದಂತಿದ್ದು, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ತಂಡದ ಆತಂಕ ಹೆಚ್ಚಿಸಿದೆ.
ಸಂಭವನೀಯ ಆಟಗಾರರುಭಾರತ: ರೋಹಿತ್(ನಾಯಕ), ಗಿಲ್, ವಿರಾಟ್, ಶ್ರೇಯಸ್, ರಾಹುಲ್, ಅಕ್ಷರ್, ಹಾರ್ದಿಕ್, ಜಡೇಜಾ, ಶಮಿ, ಕುಲ್ದೀಪ್, ಹರ್ಷಿತ್ ರಾಣಾ.ಇಂಗ್ಲೆಂಡ್: ಸಾಲ್ಟ್, ಡಕೆಟ್, ರೂಟ್, ಬ್ರೂಕ್, ಬಟ್ಲರ್(ನಾಯಕ), ಲಿವಿಂಗ್‌ಸ್ಟೋನ್, ಓವರ್ಟನ್, ಆಟ್ಕಿನ್ಸನ್, ರಶೀದ್, ವುಡ್, ಸಾಕಿಬ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.ಪಿಚ್ ರಿಪೋರ್ಟ್
ಅಹಮದಾಬಾದ್ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿದ್ದು, ಬೌಲರ್‌ಗಳ ಜೊತೆ ಬ್ಯಾಟರ್‌ಗಳಿಗೂ ಸಮಾನ ನೆರವು ನೀಡಬಹುದು. ಪಂದ್ಯದ ಆರಂಭದಲ್ಲಿ ವೇಗಿಗಳು ಮೇಲುಗೈ ಸಾಧಿಸಲಿದ್ದು, ಪಂದ್ಯ ಸಾಗಿದಂತೆ ಬ್ಯಾಟಿಂಗ್ ಸುಲಭವಾಗಲಿದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳಿಗೂ ಪಿಚ್ ನೆರವಾಗುವ ನಿರೀಕ್ಷೆಯಿದೆ.ವಿರಾಟ್‌ಗೆ 14000, ರೋಹಿತ್‌ಗೆ 11000 ರನ್ ಮೈಲುಗಲ್ಲು ಗುರಿ
ಭಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ 3ನೇ ಪಂದ್ಯದಲ್ಲಿ ಪ್ರಮುಖ ಮೈಲುಗಲ್ಲು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಕೊಹ್ಲಿ 296 ಏಕದಿನ ಪಂದ್ಯಗಳಲ್ಲಿ 13911 ರನ್ ಕಲೆಹಾಕಿದ್ದು, 14 ಸಾವಿರ ರನ್ ಮೈಲುಗಲ್ಲು ಸಾಧಿಸಲು 89 ರನ್ ಅಗತ್ಯವಿದೆ. ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ರೋಹಿತ್ 267 ಪಂದ್ಯಗಳಲ್ಲಿ 10987 ರನ್ ಗಳಿಸಿದ್ದು, 11 ಸಾವಿರ ರನ್ ಕ್ಲಬ್ ಸೇರ್ಪಡೆಗೊಳ್ಳಲು ಕೇವಲ 13 ರನ್ ಬೇಕಿದೆ.