5 ಬಾರಿ ಚಾಂಪಿಯನ್‌ ಮುಂಬೈ ಪ್ಲೇ-ಆಫ್ ಬಾಗಿಲು ಬಂದ್‌!

| Published : May 04 2024, 12:31 AM IST / Updated: May 04 2024, 04:10 AM IST

ಸಾರಾಂಶ

ಕೆಕೆಆರ್‌ಗೆ 24 ರನ್‌ಗಳಿಂದ ಶರಣಾದ ಮುಂಬೈ. ಟೂರ್ನಿಯಲ್ಲಿ 11ರಲ್ಲಿ 8ನೇ ಸೋಲು, ಕೋಲ್ಕತಾ 169/10, ಮುಂಬೈ 145/10, ಕೆಕೆಆರ್‌ಗೆ 7ನೇ ಜಯ, ಪ್ಲೇ-ಆಫ್‌ಗೆ ಸನಿಹ

ಮುಂಬೈ: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ ತಂಡಕ್ಕೆ ಶುಕ್ರವಾರ ಕೋಲ್ಕತಾ ವಿರುದ್ಧ 24 ರನ್‌ ಸೋಲು ಎದುರಾಯಿತು. 

ಇದರೊಂದಿಗೆ ತಂಡ ಆಡಿರುವ 11 ಪಂದ್ಯಗಳಲ್ಲಿ 8ನೇ ಸೋಲನುಭವಿಸಿದರೆ, ಕೋಲ್ಕತಾ 10ರಲ್ಲಿ 7ನೇ ಜಯ ದಾಖಲಿಸಿ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಯಿತು.ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ 19.5 ಓವರ್‌ಗಳಲ್ಲಿ 169ಕ್ಕೆ ಆಲೌಟಾಯಿತು. ಈ ಮೊತ್ತ ಅಸಾಧ್ಯ ಗುರಿಯೇನೂ ಆಗಿರಲಿಲ್ಲ. ಆದರೆ ಕೆಕೆಆರ್‌ನ ಬೆಂಕಿ ಬೌಲಿಂಗ್‌ ಮುಂದೆ ಮುಂಬೈ ನಿರುತ್ತರವಾಯಿತು. ಸೂರ್ಯಕುಮಾರ್‌ ಯಾದವ್‌(35 ಎಸೆತಗಳಲ್ಲಿ 56) ಹೋರಾಟದ ಹೊರತಾಗಿಯೂ ತಂಡ 18.5 ಓವರ್‌ಗಳಲ್ಲಿ 145ಕ್ಕೆ ಸರ್ವಪತನ ಕಂಡಿತು. ಟಿಮ್‌ ಡೇವಿಡ್‌(24) ಗೆಲುವಿನ ಆಸೆ ಚಿಗುರಿಸಿದ್ದರೂ ತಂಡವನ್ನು ಗೆಲ್ಲಿಸಲು ವಿಫಲರಾದರು. ಮಿಚೆಲ್ ಸ್ಟಾರ್ಕ್‌ 4 ವಿಕೆಟ್‌ ಕಿತ್ತರು.

ವೆಂಕಿ, ಮನೀಶ್‌ ಆಸರೆ: ಇದಕ್ಕೂ ಮುನ್ನ ಮುಂಬೈ ದಾಳಿಯ ಮುಂದೆ ಕೋಲ್ಕತಾ ಬ್ಯಾಟರ್‌ಗಳೂ ಪೆವಿಲಿಯನ್‌ ಪರೇಡ್‌ ನಡೆಸಿದ್ದರು. 57ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಕಾಪಾಡಿದ್ದು ವೆಂಕಟೇಶ್‌ ಅಯ್ಯರ್‌(52 ಎಸೆತಗಳಲ್ಲಿ 70) ಮತ್ತು ಮನೀಶ್‌ ಪಾಂಡೆ(31 ಎಸೆತಗಳಲ್ಲಿ 42). ಇತರ ಯಾವುದೇ ಬ್ಯಾಟರ್‌ ಎರಡಂಕಿ ಮೊತ್ತ ಗಳಿಸಲಿಲ್ಲ. ಬೂಮ್ರಾ ಹಾಗೂ ತುಷಾರ ತಲಾ 3 ವಿಕೆಟ್‌ ಕಿತ್ತರು.ಸ್ಕೋರ್: ಕೋಲ್ಕತಾ 19.5 ಓವರಲ್ಲಿ 169/10 (ವೆಂಕಟೇಶ್‌ 70, ಮನೀಶ್‌ 42, ಬೂಮ್ರಾ 3-18, ತುಷಾರ 3-42), ಮುಂಬೈ 18.5 ಓವರಲ್ಲಿ 145/10 (ಸೂರ್ಯ 56, ಸ್ಟಾರ್ಕ್‌ 4-33) ಪಂದ್ಯಶ್ರೇಷ್ಠ: ವೆಂಕಟೇಶ್‌.

12 ವರ್ಷ: ಕೆಕೆಆರ್‌ ವಾಂಖೇಡೆಯಲ್ಲಿ 12 ವರ್ಷಗಳ ಬಳಿಕ ಮೊದಲು ಗೆಲುವು ದಾಖಲಿಸಿತು. 2012ರಲ್ಲಿ ಮೊದಲ ಬಾರಿ ಮುಂಬೈಯನ್ನು ಸೋಲಿಸಿತ್ತು.

04ನೇ ಬಾರಿ: ಐಪಿಎಲ್‌ ಪಂದ್ಯದಲ್ಲಿ ಇತ್ತಂಡಗಳೂ ಆಲೌಟಾಗಿದ್ದು ಇದು 4ನೇ ಬಾರಿ.