ಸಾರಾಂಶ
ಪುಣೆ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯ ನಡೆಯುತ್ತಿರುವ ಪುಣೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ನೀರಿಗಾಗಿ ಪರದಾಟ ನಡೆಸಿದ್ದಾರೆ. ಮೊದಲ ದಿನವಾದ ಗುರುವಾರ ಸುಮಾರು 18000 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಆದರೆ ಬಹುತೇಕ ಮಂದಿ ನೀರು ಸಿಗದೆ ಪರದಾಟ ನಡೆಸಿದರು.
ಪುಣೆ ಕ್ರೀಡಾಂಗಣಕ್ಕೆ ಮೇಲ್ಚಾವಣಿ ಇಲ್ಲ. ಹೀಗಾಗಿ ಸುಡು ಬಿಸಿಲಿನಲ್ಲೇ ಕೂತು ಪಂದ್ಯ ವೀಕ್ಷಿಸಬೇಕಾಗಿದೆ. ಇದರ ಮಧ್ಯೆ ಪ್ರೇಕ್ಷಕರು ನೀರಿಗೂ ಪರದಾಟ ನಡೆಸಿದ್ದು, ಸ್ಟ್ಯಾಂಡ್‌ನಲ್ಲಿ ನೀರು ಸಿಗದ ಕಾರಣ ಕ್ರೀಡಾಂಗಣದ ನೀರಿನ ಘಟಕಕ್ಕೆ ದೌಡಾಯಿಸಿದ್ದಾರೆ. ಆದರೆ ಅಲ್ಲೂ ನೀರು ಸಿಗದಿದ್ದಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಂಸಿಎ)ಗೆ ಹಿಡಿಶಾಪ ಹಾಕಿದ್ದಾರೆ. ಈ ನಡುವೆ ಮಾರಾಟಗಾರರು 100 ಮಿ.ಲೀ. ಬಾಟಲಿಗೆ 80 ರು. ಸುಲಿಗೆ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.
ಅವ್ಯವಸ್ಥೆ, ಪ್ರೇಕ್ಷಕರ ತೀವ್ರ ಆಕ್ರೋಶದ ಬಳಿಕ ಎಂಸಿಎ ಕ್ಷಮೆಯಾಚಿಸಿದ್ದು, ಪಂದ್ಯದ ಉಳಿದ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ.
531: ಗರಿಷ್ಠ ವಿಕೆಟ್‌ನಲ್ಲಿ ಅಶ್ವಿನ್ ಏಳನೇ ಸ್ಥಾನಕ್ಕೆ
ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಭಾರತದ ತಾರಾ ಸ್ಪಿನ್ನರ್ ಆರ್.ಅಶ್ವಿನ್ 7ನೇ ಸ್ಥಾನಕ್ಕೇರಿದ್ದಾರೆ. ಗುರುವಾರ 3 ವಿಕೆಟ್ ಪಡೆದ 38 ವರ್ಷದ ಅಶ್ವಿನ್, ಒಟ್ಟಾರೆ ವಿಕೆಟ್ ಗಳಿಕೆಯನ್ನು 531ಕ್ಕೆ ಹೆಚ್ಚಿಸಿದರು. ಈ ಮೂಲಕ ಆಸ್ಟ್ರೇಲಿಯಾದ ನೇಥನ್ ಲಯನ್ (530)ರನ್ನು ಹಿಂದಿಕ್ಕಿದರು. ಇನ್ನು, ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಅಶ್ವಿನ್ ಅಗ್ರಸ್ಥಾನಕ್ಕೇರಿದರು. ಅವರು 39 ಪಂದ್ಯಗಳಲ್ಲಿ 188 ವಿಕೆಟ್ ಪಡೆದಿದ್ದಾರೆ. 43 ಪಂದ್ಯಗಳಲ್ಲಿ 187 ವಿಕೆಟ್ ಪಡೆದಿರುವ ನೇಥನ್ ಲಯನ್‌ರನ್ನು ಅಶ್ವಿನ್ ಹಿಂದಿಕ್ಕಿದರು.