ಪ್ಯಾರಿಸ್ ಒಲಿಂಪಿಕ್ಸ್‌: ಬ್ಯಾಡ್ಮಿಂಟನ್‌ ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ಸೇನ್‌

| Published : Aug 03 2024, 12:32 AM IST / Updated: Aug 03 2024, 04:38 AM IST

ಸಾರಾಂಶ

ಈ ಸಾಧನೆ ಮಾಡಿದ ಮೊದಲ ಪುರುಷ ಶಟ್ಲರ್‌. 2012ರಲ್ಲಿ ಪಾರುಪಳ್ಳಿ ಕಶ್ಯಪ್‌, 2016ರಲ್ಲಿ ಕಿದಂಬಿ ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಭಾರತೀಯರ ಈ ವರೆಗಿನ ಶ್ರೇಷ್ಠ ಸಾಧನೆ

ಪ್ಯಾರಿಸ್‌: ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಅಂತಿಮ 4ರ ಘಟ್ಟ ಪ್ರವೇಶಿಸಿದ ಭಾರತದ ಮೊದಲ ಶಟ್ಲರ್‌ ಎನಿಸಿಕೊಂಡಿದ್ದಾರೆ. 2012ರಲ್ಲಿ ಪಾರುಪಳ್ಳಿ ಕಶ್ಯಪ್‌, 2016ರಲ್ಲಿ ಕಿದಂಬಿ ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಭಾರತೀಯರ ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ 22 ವರ್ಷದ ಸೇನ್‌ ಅವರು ಚೈನೀಸ್‌ ತೈಪೆಯ ಚೊಯು ಟೀನ್‌ ಚೆನ್‌ ವಿರುದ್ಧ 19-21, 21-15, 21-12 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 

ಉತ್ತಮ ಆಟ ಪ್ರದರ್ಶಿಸಿದರೂ ಸೇನ್‌ಗೆ ಮೊದಲ ಗೇಮ್‌ ಗೆಲ್ಲಲಾಗಲಿಲ್ಲ. ಆದರೆ 2 ಮತ್ತು 3ನೇ ಗೇಮ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಟೀನ್‌ಗೆ ಪ್ರಬಲ ಪೈಪೋಟಿ ನೀಡಿದ ಸೇನ್‌, ಪಂದ್ಯ ತಮ್ಮದಾಗಿಸಿಕೊಂಡರು.ಸೇನ್ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯ ಶಟ್ಲರ್‌ ಎನಿಸಿಕೊಂಡಿದ್ದಾರೆ. ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌, ಸಾತ್ವಿಕ್‌ ಹಾಗೂ ಚಿರಾಗ್‌ ಈಗಾಗಲೇ ಸೋತು ಹೊರಬಿದ್ದಿದ್ದಾರೆ.

ಜುಡೊ: ಮೊದಲ ಸುತ್ತಲ್ಲೇ ಸೋತ ಭಾರತದ ತುಲಿಕಾ

ಜುಡೊ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. 2022ರ ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ 25 ವರ್ಷದ ತುಲಿಕಾ ಶುಕ್ರವಾರ ನಡೆದ ಮಹಿಳೆಯರ 78 ಕೆ.ಜಿ. ವಿಭಾಗದ ಎಲಿಮಿನೇಷನ್‌ ಸುತ್ತಿನಲ್ಲಿ ಕ್ಯೂಬಾ ದೇಶದ ಇಡಾಲಿಸ್‌ ಓರ್ಟಿಜ್‌ ವಿರುದ್ಧ 0-10 ಅಂತರದಲ್ಲಿ ಪರಾಭವಗೊಂಡರು. 

4 ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಇಡಾಲಿಸ್‌ ಪಂದ್ಯವನ್ನು ಕೇವಲ 28 ಸೆಕೆಂಡ್‌ಗಳಲ್ಲೇ ಗೆದ್ದರು. ತುಲಿಕಾ ಸೋಲಿನೊಂದಿಗೆ ಪ್ಯಾರಿಸ್‌ ಕ್ರೀಡಾಕೂಟದ ಜುಡೊ ಸ್ಪರ್ಧೆಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ತುಲಿಕಾ ಭಾರತದ ಏಕೈಕ ಜುಡೊ ಸ್ಪರ್ಧಿಯಾಗಿದ್ದರು.