ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಆರೋಗ್ಯವನ್ನು ಕಳೆದುಕೊಂಡರೆ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಂತೆ. ಆದ್ದರಿಂದ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅಭಿಪ್ರಾಯಪಟ್ಟರು.ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಲಿಮಿಟೆಡ್, ಜಸ್ಟೀಸ್ ಕೆ.ಎಸ್.ಹೆಗ್ಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಮತ್ತು ಗ್ರಾಮಾಭಿವೃದ್ಧಿ ಮಂಡಳಿ ಕುಮಾರಳ್ಳಿ-ಬಾಚಳ್ಳಿ ವತಿಯಿಂದ ಭಾನುವಾರ ಶಾಂತಳ್ಳಿ ಜಿ.ಎಂ.ಪಿ. ಶಾಲಾ ಆವರಣದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ವಿಷಯದಲ್ಲಿ ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ರೈತಾಪಿ ವರ್ಗಕ್ಕೆ ಉಪಕಾರಿಯಾಗುತ್ತವೆ. ಎಂಸಿಎಫ್ ಸಂಸ್ಥೆ ತಮ್ಮ ಲಾಭಂಶದಲ್ಲಿ ಒಂದಷ್ಟು ಹಣವನ್ನು ಸಮಾಜಸೇವೆಗೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಅದರಲ್ಲೂ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡುತ್ತಿರುವ ಬಗ್ಗೆ ತಿಳಿದು ಹೆಮ್ಮೆ ಎನಿಸಿತು. ಪ್ರತಿಯೊಬ್ಬರು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ಸಮಾಜಮುಖಿ ಕೆಲಸಗಳಿಗೆ ನೀಡಿದರೆ ದೊಡ್ಡ ಮಟ್ಟದ ತೃಪ್ತಿ ಸಿಗುತ್ತದೆ ಎಂದು ಹೇಳಿದರು.ಎಂಸಿಎಫ್ ಲಿಮಿಟೆಡ್‍ನ ಸಿಇಒ ನಿತೀನ್ ಎಂ. ಕಂಠಕ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಕೆ.ಎಸ್. ಹೆಗ್ಗಡೆ ಚಾರಿಟೇಬಲ್ ಆಸ್ಪತ್ರೆ ಸಹಯೋಗದೊಂದಿಗೆ 55ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದೇವೆ. 16 ಸಾವಿರ ಮಂದಿಗೆ ತಪಾಸಣೆ ಮಾಡಲಾಗಿದೆ. 9 ಸಾವಿರ ಮಂದಿಗೆ ಉಚಿತ ಗುಣಮಟ್ಟದ ಕನ್ನಡಕ ವಿತರಿಸಲಾಗಿದೆ. 2 ಸಾವಿರ ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ ಎಂದು ಹೇಳಿದರು.
ಶಾಂತಳ್ಳೀ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್, ಅಖಿಲಾ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಧೀರ್, ಜಿಎಂಪಿ ಎಸ್‍ಡಿಎಂಸಿ ಅಧ್ಯಕ್ಷ ಕೆ.ಸಿ.ಗುರುಪ್ರಸಾದ್, ಖಚಾಂಚಿ ರವಿ ಪ್ರಸಾದ್, ಎಂಸಿಎಫ್ ಸಿಎಫ್‍ಓ ಮುರುಳೀಧರ್, ಸಿಎಂಓ ಎಸ್. ಗಿರೀಶ್, ನೇತ್ರತಜ್ಞ ವಿಜಯ್ ಪೈ, ಡಾ.ಯೋಗೇಶ್, ಮಾಜಿ ಸೈನಿಕ ಜಿ.ಡಿ.ಪೂವಯ್ಯ ಇದ್ದರು.ಶಾಂತಳ್ಳಿ ಜಿ.ಎಂ.ಪಿ.ಶಾಲೆಗೆ ಎಂಸಿಎಫ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ, ಗ್ರೀನ್‍ಬೋರ್ಡ್ ಹಾಗೂ ಕುರ್ಚಿಗಳನ್ನು ನೀಡಲಾಯಿತು. ಸುಮಾರು 300 ಮಂದಿ ನೇತ್ರತಪಾಸಣೆ ಮಾಡಿಸಿಕೊಂಡರು. ಉಚಿತ ಕನ್ನಡಕಗಳನ್ನು ಏ.8ರಂದು ಶಾಂತಳ್ಳಿ ಜಿಎಂಪಿ ಶಾಲೆಯಲ್ಲಿ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದರು.