ಸಾರಾಂಶ
ಹೊವೆ(ಇಂಗ್ಲೆಂಡ್): ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನ ಸಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ತಂಡದ ಯುವ ಬ್ಯಾಟರ್ ಲೂಯಿಸ್ ಕಿಂಬರ್ ವೇಗದ ದ್ವಿಶತಕ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ 296 ರನ್ ಗಳಿಸಿದ್ದ ಸಸೆಕ್ಸ್, ಲೀಸೆಸ್ಟರ್‌ಶೈರ್‌ಗೆ 464 ರನ್ ಗುರಿ ನೀಡಿತ್ತು. 175ಕ್ಕೆ 7 ವಿಕೆಟ್ ಕಳೆದುಕೊಂಡಿದ್ದ ತಂಡ ಸಂಕಷ್ಟದಲ್ಲಿತ್ತು.
ಆದರೆ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕಿಂಬರ್, 100 ಎಸೆತಗಳಲ್ಲೇ ದ್ವಿಶತಕ ಪೂರ್ಣಗೊಳಿಸಿದರು. ಇದು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ವೇಗದ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 2ನೇ ಅತಿ ವೇಗದ ದ್ವಿಶತಕ. 2010ರಲ್ಲಿ ಗ್ಲಾಮೊರ್ಗನ್ ಪರ ಆನ್ಯುರಿನ್ ಡೊನಾಲ್ಡ್ ಡರ್ಬಿಶೈರ್ ವಿರುದ್ಧ 123 ಎಸೆತಗಳಲ್ಲಿ ದ್ವಿಶತಕ ಹೊಡೆದಿದ್ದರು.
2018ರಲ್ಲಿ ಕಾಬೂಲ್ ರೀಜನ್ ಪರ ಶಫೀಕುಲ್ಲಾ ಶಿನ್‌ವಾರಿ 89 ಎಸೆತಗಲ್ಲಿ ದ್ವಿಶತಕ ಬಾರಿಸಿದ್ದ ಈಗಲೂ ದಾಖಲೆ.ಇನ್ನು, ಕಿಂಬರ್ 21 ಸಿಕ್ಸರ್ ಸಿಡಿಸಿದರು. ಇದು ಕೌಂಟಿಯಲ್ಲಿ ಗರಿಷ್ಠ. 2022ರಲ್ಲಿ ವೊರ್ಸೆಸ್ಟರ್‌ಶೈರ್ ವಿರುದ್ಧ ದರ್ಹಮ್‌ನ ಬೆನ್ ಸ್ಟೋಕ್ಸ್ 17 ಸಿಕ್ಸರ್ ಬಾರಿಸಿದ್ದರು. ಕೌಂಟಿಯಲ್ಲಿ 8ನೇ ಕ್ರಮಾಂಕದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯನ್ನೂ ಕಿಂಬರ್ ತಮ್ಮ ಹೆಸರಿಗೆ ಬರೆದುಕೊಂಡರು.
ಒಂದೇ ಓವರಲ್ಲಿ 43 ರನ್: ಹೊಸ ದಾಖಲೆ
ಇನ್ನಿಂಗ್ಸ್‌ನ 59ನೇ ಓವರ್ ಎಸೆದ ಸಸೆಕ್ಸ್ ತಂಡದ ಓಲಿ ರಾಬಿನ್ಸನ್ 43 ರನ್ ಬಿಟ್ಟುಕೊಟ್ಟರು. ಇದು 134 ವರ್ಷದಲ್ಲೇ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ. ರಾಬಿನ್ಸನ್‌ರ ಓವರಲ್ಲಿ ಕಿಂಬರ್ 2 ಸಿಕ್ಸರ್, 6 ಬೌಂಡರಿ ಸಿಡಿಸಿ ಕೊನೆ ಎಸೆತದಲ್ಲಿ ಸಿಂಗಲ್ ಪಡೆದರು. ಕೌಂಟಿ ಕ್ರಿಕೆಟ್‌ನಲ್ಲಿ ನೋಬಾಲ್ ಎಸೆದರೆ 2 ರನ್ ಪೆನಾಲ್ಟಿ ಇರುವುದರಿಂದ ರಾಬಿನ್ಸನ್ ಓವರಲ್ಲಿ 43 ರನ್ ಬಿಟ್ಟುಕೊಟ್ಟಂತಾಯಿತು.