ಕೃಷ್ಣ, ದೇವ್‌ ಮ್ಯಾಜಿಕ್‌: ವಿಜಯ್‌ ಹಜಾರೆ ಏಕದಿನದಲ್ಲಿ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ

| Published : Jan 12 2025, 01:17 AM IST / Updated: Jan 12 2025, 04:12 AM IST

ಸಾರಾಂಶ

ಕ್ವಾರ್ಟರ್‌ ಫೈನಲ್‌ನಲ್ಲಿ ಬರೋಡಾ ವಿರುದ್ಧ 5 ರನ್‌ ಗೆಲುವು. ದೇವ್‌ದತ್‌ ಶತಕ, ಕರ್ನಾಟಕ 281/8. ಬರೋಡಾ 49.5 ಓವರ್‌ನಲ್ಲಿ 276ಕ್ಕೆ ಆಲೌಟ್‌

ವಡೋದರಾ: ದೇವದತ್‌ ಪಡಿಕ್ಕಲ್‌ ಹೋರಾಟದ ಶತಕ ಹಾಗೂ ಡೆತ್‌ ಓವರ್‌ನಲ್ಲಿ ಪ್ರಸಿದ್ಧ್‌ ಕೃಷ್ಣ ಮ್ಯಾಜಿಕ್‌ ನೆರವಿನಿಂದ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸೆಮಿಫೈನಲ್‌ ಪ್ರವೇಶಿಸಿದೆ. 

ಸತತ 3ನೇ ಬಾರಿ ಸೆಮೀಸ್‌ಗೇರಿರುವ ತಂಡ 5 ವರ್ಷ ಬಳಿಕ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡ ಬರೋಡಾ ವಿರುದ್ಧ 5 ರನ್‌ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ರಾಜ್ಯ 8 ವಿಕೆಟ್‌ಗೆ 281 ರನ್‌ ಗಳಿಸಿತು. ಆಸ್ಟ್ರೇಲಿಯಾ ಸರಣಿಯಿಂದ ಮರಳಿದ್ದ ದೇವದತ್‌ 99 ಎಸೆತಗಳಲ್ಲಿ 102 ರನ್‌ ಸಿಡಿಸಿ ತಂಡವನ್ನು ಕಾಪಾಡಿದರು. ಅನೀಶ್‌ ಕೆ.ವಿ. 52, ಸ್ಮರಣ್‌ 28, ಕೆ.ಎಲ್‌.ಶ್ರೀಜಿತ್‌ 28 ರನ್‌ ಕೊಡುಗೆ ನೀಡಿದರು. 

ನಾಯಕ ಮಯಾಂಕ್‌(06) ಈ ಪಂದ್ಯದಲ್ಲಿ ವಿಫಲರಾದರು. ರಾಜ್‌ ಲಿಂಬಾನಿ, ಆತಿತ್ ಸೇಠ್‌ ತಲಾ 2 ವಿಕೆಟ್‌ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬರೋಡಾ ಒಂದು ಹಂತದಲ್ಲಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಕೊನೆಯಲ್ಲಿ ಕರ್ನಾಟಕ ಮೇಲುಗೈ ಸಾಧಿಸಿತು. ಬರೋಡಾ 49.5 ಓವರಲ್ಲಿ 276ಕ್ಕೆ ಆಲೌಟಾಯಿತು. ಆರಂಭಿಕ ಆಟಗಾರ ಶಾಶ್ವತ್‌ ರಾವತ್ 104, ಆತಿತ್ 56 ರನ್‌ ಸಿಡಿಸಿದರೂ ತಂಡವನ್ನು ಗೆಲ್ಲಿಸಲು ವಿಫಲರಾದರು.

 ತಂಡ ಒಂದು ಹಂತದಲ್ಲಿ 2 ವಿಕೆಟ್‌ಗೆ 185 ರನ್‌ ಗಳಿಸಿತ್ತು. ಆದರೆ ಕೊನೆಯಲ್ಲಿ ಮುಗ್ಗಿರಿಸಿ 91 ರನ್‌ಗೆ ಕೊನೆ 8 ವಿಕೆಟ್‌ ಕಳೆದುಕೊಂಡಿತು. ತಂಡಕ್ಕೆ ಕೊನೆ 4 ಓವರಲ್ಲಿ 38 ರನ್‌ ಬೇಕಿತ್ತು. 47ನೇ ಓವರ್‌ನಲ್ಲಿ ಪ್ರಸಿದ್ಧ್‌, ಶಾಶ್ವತ್‌ ಸೇರಿ ಇಬ್ಬರನ್ನು ಔಟ್‌ ಮಾಡಿ ಪಂದ್ಯ ಕರ್ನಾಟಕ ಪರ ವಾಲುವಂತೆ ಮಾಡಿದರು. ಕೊನೆ ಓವರ್‌ಗೆ 13 ರನ್‌ ಬೇಕಿದ್ದಾಗ ಬರೋಡಾ ಗೆಲ್ಲಲಿಲ್ಲ. ಸ್ಕೋರ್‌: ಕರ್ನಾಟಕ 50 ಓವರಲ್ಲಿ 281/8 (ದೇವದತ್ 102, ಅನೀಶ್‌ 52, ಆತಿತ್‌ 3-41, ರಾಜ್‌ 3-47), ಬರೋಡಾ 49.5 ಓವರಲ್ಲಿ 276/10 (ಶಾಶ್ವತ್‌ 104, ಆತಿತ್‌ 56, ಕೌಶಿಕ್‌ 2-39, ಪ್ರಸಿದ್ಧ್‌ 2-60, ಅಭಿಲಾಶ್‌ 2-70)

ಪಂದ್ಯಶ್ರೇಷ್ಠ: ದೇವ್‌ದತ್‌ ಪಡಿಕ್ಕಲ್‌

ಮಹಾರಾಷ್ಟ್ರ ಸೆಮಿಗೆ

ಶನಿವಾರ ನಡೆದ ಮತ್ತೊಂದು ಕ್ವಾರ್ಟರ್‌ನಲ್ಲಿ ಪಂಜಾಬ್‌ ವಿರುದ್ಧ ಮಹಾರಾಷ್ಟ್ರ 70 ರನ್‌ ಗೆಲುವು ಸಾಧಿಸಿ, ಸೆಮಿಫೈನಲ್‌ಗೇರಿತು. ಪಂಜಾಬ್‌ 6 ವಿಕೆಟ್‌ಗೆ 275 ರನ್‌ ಗಳಿಸಿದರೆ, ಪಂಜಾಬ್‌ 44.4 ಓವರಲ್ಲಿ 205ಕ್ಕೆ ಆಲೌಟಾಯಿತು.

ಜ.15, 16ಕ್ಕೆ ಸೆಮೀಸ್‌

ಟೂರ್ನಿಯ ಸೆಮಿಫೈನಲ್‌ ಜ.15, 16ಕ್ಕೆ ನಡೆಯಲಿವೆ. ಕರ್ನಾಟಕಕ್ಕೆ ಜ.15ರಂದು ಗುಜರಾತ್‌ ಅಥವಾ ಹರ್ಯಾಣ ಸವಾಲು ಎದುರಾಗಲಿದೆ. ಜ.16ಕ್ಕೆ ಮಹಾರಾಷ್ಟ್ರ ತಂಡ ವಿದರ್ಭ ಅಥವಾ ರಾಜಸ್ಥಾನ ವಿರುದ್ಧ ಆಡಲಿದೆ.