ಮಂಧನಾ, ರೇಣುಕಾ ಮಿಂಚು: ಭಾರತಕ್ಕೆ ವಿಂಡೀಸ್‌ ವಿರುದ್ಧ ದಾಖಲೆಯ 211 ರನ್‌ ಗೆಲುವು!

| Published : Dec 23 2024, 01:02 AM IST / Updated: Dec 23 2024, 04:08 AM IST

ಸಾರಾಂಶ

ವಿಂಡೀಸ್‌ ವಿರುದ್ಧ ಮೊದಲ ಏಕದಿನ ಪಂದ್ಯ. ರನ್‌ ಅಂತರದಲ್ಲಿ 2ನೇ ಅತಿ ದೊಡ್ಡ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ.

ವಡೋದರಾ: ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 211 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 9 ವಿಕೆಟ್‌ಗೆ 314 ರನ್ ಕಲೆಹಾಕಿತು. ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ ಸ್ಮೃತಿ ಮಂಧನಾ 91 ರನ್‌ ಸಿಡಿಸಿದರು. ಹರ್ಲೀನ್‌ ಡಿಯೋಲ್‌ 44, ಪ್ರತಿಕಾ ರಾವಲ್‌ 40, ಹರ್ಮನ್‌ಪ್ರೀತ್‌ 34, ಜೆಮಿಮಾ 31, ರಿಚಾ ಘೋಷ್‌ 26 ರನ್‌ ಸಿಡಿಸಿದರು. ಜೈದಾ ಜೇಮ್ಸ್‌ 5 ವಿಕೆಟ್‌ ಕಿತ್ತರು. ಬೃಹತ್‌ ಗುರಿ ಬೆನ್ನತ್ತಿದ ವಿಂಡೀಸ್‌ 26.2 ಓವರಲ್ಲಿ 103 ರನ್‌ಗೆ ಆಲೌಟಾಯಿತು. ರೇಣುಕಾ ಸಿಂಗ್‌ 29ಕ್ಕೆ 5 ವಿಕೆಟ್‌ ಕಿತ್ತರು. 2ನೇ ಏಕದಿನ ಮಂಗಳವಾರ ನಡೆಯಲಿದೆ.

02ನೇ ಗರಿಷ್ಠ: ಭಾರತ ಮಹಿಳಾ ತಂಡ ರನ್‌ ಆಧಾರದಲ್ಲಿ 2ನೇ ದೊಡ್ಡ ಜಯ ದಾಖಲಿಸಿತು. 2017ರಲ್ಲಿ ಐರ್ಲೆಂಡ್‌ ವಿರುದ್ಧ 249 ರನ್‌ಗಳಿಂದ ಗೆದ್ದಿದ್ದು ಈಗಲೂ ತಂಡದ ದಾಖಲೆ.

ಕ್ಯಾಲೆಂಡರ್‌ ವರ್ಷದಲ್ಲಿ ಗರಿಷ್ಠ ಸ್ಕೋರ್‌: ಹೊಸ ದಾಖಲೆ ಬರೆದ ಸ್ಮೃತಿ

ವಡೋದರಾ: ಕ್ಯಾಲೆಂಡರ್‌ ವರ್ಷದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ಆಟಗಾರ್ತಿ ಎಂಬ ಖ್ಯಾತಿಗೆ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ. ಅವರು ಈ ವರ್ಷ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಒಟ್ಟಾರೆ 1602 ರನ್‌ ಗಳಿಸಿದ್ದಾರೆ. ಅವರು 32 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ದಾಖಲೆ. ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಟ್‌ ಈ ವರ್ಷ 1593 ರನ್‌ ಗಳಿಸಿದ್ದಾರೆ. ಅವರನ್ನು ಸ್ಮೃತಿ ಹಿಂದಿಕ್ಕಿದ್ದಾರೆ. 2022ರಲ್ಲಿ ಇಂಗ್ಲೆಂಡ್‌ನ ಶೀವರ್‌ ಬ್ರಂಟ್‌ 1346 ರನ್‌ ಗಳಿಸಿದ್ದು, 3ನೇ ಸ್ಥಾನದಲ್ಲಿದ್ದಾರೆ. ಸ್ಮೃತಿ 2018ರಲ್ಲಿ 1291 ಹಾಗೂ 2022ರಲ್ಲಿ 1290 ರನ್‌ ಗಳಿಸಿದ್ದರು.