ಸಾರಾಂಶ
ಮಂಡ್ಯ: ಮಂಡ್ಯ ಓಪನ್ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ಕರಣ ಸಿಂಗ್ ಹಾಗೂ ಸಿದ್ಧಾರ್ಥ ವಿಶ್ವಕರ್ಮ ಇಬ್ಬರೂ ಸೋಲು ಅನುಭವಿಸುವ ಮೂಲಕ ಭಾರತದ ಸವಾಲು ಅಂತ್ಯಗೊಂಡಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕರಣ ಸಿಂಗ್ ನೆದರ್ಲೆಂಡ್‌ನ ಜೆಲ್ಲೆ ಸೆಲ್ಸ್ ಎದುರು 1-6, 4-6ರಿಂದ ಸೋತರೆ, ಸಿದ್ಧಾರ್ಥ ವಿಶ್ವಕರ್ಮ ಇಸ್ರೇಲ್‌ನ ಒರೆಲ್ ಕಿಮ್ಹಿ ವಿರುದ್ಧ 6-2, 5-7, 4-6ರಿಂದ ಪರಾಭವಗೊಂಡರು. ನೆದರ್ಲೆಂಡ್‌ನ ಜೆಲ್ಲೆ ಸೆಲ್ಸ್ ಮತ್ತು ಇಸ್ರೇಲಿನ ಒರೆಲ್ ಕಿಮ್ಹಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಪುರುಷರ ಡಬಲ್ಸ್ ಫೈನಲ್‍ನಲ್ಲಿ ಮನೀಶ್ ಸುರೇಶಕುಮಾರ ಹಾಗೂ ಪರೀಕ್ಷಿತ ಸೊಮಾನಿ ಜೋಡಿ ಕೊರಿಯಾದ ವೂಬಿನ್ ಶಿನ್ ಹಾಗೂ ಭಾರತದ ಕರಣ ಸಿಂಗ್ ಜೋಡಿಯನ್ನು 4-6, 6-1, 10-8ರಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.
ಜ.18ರಿಂದ ಬೆಂಗ್ಳೂರಲ್ಲಿ ಅಂತರಾಷ್ಡ್ರೀಯ ಚೆಸ್ ಟೂರ್ನಿ
ಚೊಚ್ಚಲ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿ ಜ.18ರಿಂದ 26ರ ವರೆಗೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಶನಿವಾರ ಈ ಬಗ್ಗೆ ಬೆಂಗಳೂರು ಜಿಲ್ಲಾ ಚೆಸ್ ಸಂಸ್ಥೆ(ಬಿಯುಡಿಸಿಎ) ಪದಾಧಿಕಾರಿಗಳು ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.
ಟೂರ್ನಿಯಲ್ಲಿ ಭಾರತ ಸೇರಿ 20 ದೇಶಗಳ 2000+ ಆಟಗಾರರು ಪಾಲ್ಗೊಳ್ಳಲಿದ್ದಾರೆ. 40 ಗ್ರ್ಯಾಂಡ್‌ಮಾಸ್ಟರ್‌ಗಳೂ ಸ್ಪರ್ಧಿಸಲಿದ್ದಾರೆ. ಟೂರ್ನಿಯು 50 ಲಕ್ಷ ರು. ಬಹುಮಾನ ಮೊತ್ತ ಹೊಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫಿಬಾ ಏಷ್ಯಾ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ರಾಜ್ಯ ಚೆಸ್ ಸಂಸ್ಥೆ ಅಧ್ಯಕ್ಷ ಡಿ.ಪಿ.ಅನಂತ, ಬಿಯುಡಿಸಿಎ ಅಧ್ಯಕ್ಷೆ ಸೌಮ್ಯ ಇದ್ದರು.