ಸಾರಾಂಶ
ಪ್ಯಾರಿಸ್: ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಚಿನ್ನ ವಿಜೇತ ಭಾರತದ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಪ್ಯಾರಿಸ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 22 ವರ್ಷದ ನರ್ವಾಲ್ 10 ಮೀ. ಏರ್ ಪಿಸ್ತೂಲ್(ಎಸ್‌ಎಚ್1) ವಿಭಾಗದಲ್ಲಿ 234.9 ಅಂಕಗಳೊಂದಿಗೆ 2ನೇ ಸ್ಥಾನ ಗಿಟ್ಟಿಸಿಕೊಂಡರು.
ದಕ್ಷಿಣ ಕೊರಿಯಾದ ಜೊ ಜೊಯೆಂಗ್ಡು 237.4 ಅಂಕಗಳೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಪಡೆದಿದ್ದ ಮನೀಶ್, ಫೈನಲ್‌ನಲ್ಲಿ ಒಂದು ಹಂತದಲ್ಲಿ ಚಿನ್ನ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರು.
ಆದರೆ ಕೊನೆಯಲ್ಲಿ ಸತತವಾಗಿ 9 ಅಂಕಗಳನ್ನು ಗಳಿಸಿದ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮನೀಶ್ ಟೋಕಿಯೋದಲ್ಲಿ ಮಿಶ್ರ ವಿಭಾಗದ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.ಇದಕ್ಕೂ ಮುನ್ನ ಭಾರತದ ಮತ್ತೋರ್ವ ಸ್ಪರ್ಧಿ, 17 ವರ್ಷದ ರುದ್ರಾಂಶ್ ಖಂಡೇಲ್‌ವಾಲ್ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನಿಯಾಗಿ, ಫೈನಲ್‌ಗೇರುವ ಅವಕಾಶ ಕಳೆದುಕೊಂಡರು.
ಫುಟ್ಬಾಲ್ ಮೇಲೆ ಪ್ರೀತಿ: ಶೂಟಿಂಗಲ್ಲಿ ಸಿಕ್ತು ಯಶಸ್ಸು
ಹುಟ್ಟುವಾಗಲೇ ಬಲಗೈ ವಿರೂಪವಾಗಿದ್ದ ಮನೀಶ್‌ಗೆ ಬಾಲ್ಯದಲ್ಲಿ ಫುಟ್ಬಾಲ್ ಮೇಲೆ ಹೆಚ್ಚಿನ ಆಸಕ್ತಿಯಿತ್ತು. ಆದರೆ ಅಂಗವೈಕಲ್ಯದಿಂದಾಗಿ ಮನೀಶ್‌ಗೆ ಫುಟ್ಬಾಲ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ಥಳೀಯ ಕ್ಲಬ್‌ಗಳ ಪರ ಆಡಿದರೂ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಹೀಗಾಗಿ 2016ರಲ್ಲಿ ತಮ್ಮ ತಂದೆಯ ಸಹಕಾರದೊಂದಿಗೆ ಹರ್ಯಾಣದ ಬಲ್ಲಾಬ್‌ಘರ್ ಎಂಬಲ್ಲಿ ಶೂಟಿಂಗ್ ಕೇಂದ್ರದಲ್ಲಿ ತರಬೇತಿಗೆ ಸೇರ್ಪಡೆಗೊಂಡರು. 2021ರ ಪ್ಯಾರಾ ಶೂಟಿಂಗ್ ವಿಶ್ವಕಪ್‌ನ 50 ಮೀ. ಪಿಸ್ತೂಲ್ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಮನೀಸ್‌ಗೆ ದಿಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ, ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಸ್ಫೂರ್ತಿ.
ಪ್ಯಾರಾ ಶೂಟಿಂಗ್‌ನಲ್ಲಿ 8ನೇ ಪದಕ ಗೆದ್ದ ಭಾರತ
ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ 8ನೇ ಪದಕ ತನ್ನದಾಗಿಸಿಕೊಂಡಿತು. ಟೋಕಿಯೋದಲ್ಲಿ ಭಾರತಕ್ಕೆ 2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಲಭಿಸಿತ್ತು. ಈ ಬಾರಿ 1 ಚಿನ್ನ, 1 ಬೆಳ್ಳಿ, 1 ಕಂಚು ಪಡೆದಿದೆ.