ಪ್ಯಾರಿಸ್‌ನಲ್ಲಿ ಮಿನುಗಿದ ಮನು: ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್‌

| Published : Jul 29 2024, 12:57 AM IST / Updated: Jul 29 2024, 03:58 AM IST

ಸಾರಾಂಶ

ಪ್ಯಾರಿಸ್‌ ಗೇಮ್ಸ್‌ನಲ್ಲಿ ಖಾತೆ ತೆರೆದ ಭಾರತ. ಶೂಟಿಂಗ್‌ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನು ಭಾಕರ್‌ ಕಂಚಿನ ಸಾಧನೆ. ಶೂಟಿಂಗ್‌ನ 12 ವರ್ಷಗಳ ಪದಕ ಬರ ನೀಗಿಸಿದ ಮನು. ಪ್ರಧಾನಿ ಮೋದಿ ಸೇರಿ ಗಣ್ಯರ ಶ್ಲಾಘನೆ.

ಪ್ಯಾರಿಸ್‌: 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆ ತೆರೆದಿದೆ. ಮಹಿಳೆಯರ ಶೂಟಿಂಗ್‌ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನು ಭಾಕರ್‌ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. 

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್‌ ಎನ್ನುವ ಹಿರಿಮೆಗೆ ಮನು ಪಾತ್ರರಾಗಿದ್ದಾರೆ. ಈ ಮೂಲಕ, ಒಲಿಂಪಿಕ್‌ ಶೂಟಿಂಗ್‌ ಪದಕಕ್ಕೆ ಭಾರತದ 12 ವರ್ಷದ ಕಾಯುವಿಕೆಗೆ ತೆರೆ ಬಿದ್ದಿದೆ. ಶನಿವಾರ ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದ ಮನು, ಭಾನುವಾರ ನಡೆದ ಫೈನಲ್‌ನಲ್ಲೂ ಲಯ ಮುಂದುವರಿಸಿದರು. 

8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ಮೊದಲ 5 ಯತ್ನಗಳ ಬಳಿಕ ಅಗ್ರ-3ರಲ್ಲಿ ಸ್ಥಾನ ಪಡೆದ ಮನು, ಸ್ಪರ್ಧೆಯುದ್ದಕ್ಕೂ ಪದಕ ನಿರೀಕ್ಷೆ ಉಳಿಸಿಕೊಂಡರು. ಹಂಗೇರಿ, ಚೀನಾ, ವಿಯಾಟ್ನಾಂನ ಶೂಟರ್‌ಗಳನ್ನು ಹಿಂದಿಕ್ಕಿದ ಮನು, ಸ್ಥಿರ ಪ್ರದರ್ಶನ ತೋರುತ್ತಾ ಅಂಕ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡರು. ಕೊನೆಯಲ್ಲಿ ದಕ್ಷಿಣ ಕೊರಿಯಾದ ಇಬ್ಬರು, ಮನು ಮಾತ್ರ ಸ್ಪರ್ಧೆಯಲ್ಲಿ ಉಳಿದುಕೊಂಡಾಗ ಭಾರತ ಮೊದಲ ಪದಕ ಗೆಲ್ಲುವುದು ಖಚಿತವಾಯಿತು. 2ನೇ ಸ್ಥಾನಕ್ಕೆ ನಡೆದ ಯತ್ನದಲ್ಲಿ ಮನು 10.3 ಅಂಕ ಪಡೆದರೆ, ಕೊರಿಯಾದ ಕಿಮ್‌ ಯೇಜಿ 10.5 ಅಂಕ ಗಳಿಸಿದ ಪರಿಣಾಮ ಮನು ಕಂಚಿಗೆ ತೃಪ್ತಿಪಡಬೇಕಾಯಿತು. ಮನು ಒಟ್ಟಾರೆ 221.7 ಅಂಕ ಪಡೆದು 3ನೇ ಸ್ಥಾನ ಗಳಿಸಿದರು. ದ.ಕೊರಿಯಾದ ಒ ಯೆ ಜಿನ್‌ 243.2 ಅಂಕಗಳೊಂದಿಗೆ ಒಲಿಂಪಿಕ್ಸ್‌ ದಾಖಲೆ ಬರೆದು ಚಿನ್ನ ಗೆದ್ದರೆ, ಕಿಮ್‌ ಯೇಜಿ 241.3 ಅಂಕಗಳೊಂದಿಗೆ ಬೆಳ್ಳಿ ಪಡೆದರು.

ಇನ್ನೂ 2 ವಿಭಾಗಗಳಲ್ಲಿ ಮನು ಭಾಕರ್‌ ಸ್ಪರ್ಧೆ

ಮನು ಭಾಕರ್‌ ಪ್ಯಾರಿಸ್‌ ಗೇಮ್ಸ್‌ನ ಇನ್ನೂ 2 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಕಣಕ್ಕಿಳಿಯಲಿರುವ ಅವರು, ಮಹಿಳೆಯರ 25 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲೂ ಸ್ಪರ್ಧಿಸಲಿದ್ದು, ಪದಕ ನಿರೀಕ್ಷೆಯಲ್ಲಿದ್ದಾರೆ.

ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 5ನೇ ಶೂಟರ್‌

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 5ನೇ ಶೂಟರ್‌ ಎಂಬ ಹೆಗ್ಗಳಿಕೆಗೆ ಮನು ಭಾಕರ್‌ ಪಾತ್ರರಾಗಿದ್ದಾರೆ. ಈ ಮೊದಲು 2004ರಲ್ಲಿ ರಾಜ್ಯವರ್ಧನ್‌ ರಾಥೋಡ್‌ ಬೆಳ್ಳಿ, 2008ರಲ್ಲಿ ಅಭಿನವ್‌ ಬಿಂದ್ರಾ ಚಿನ್ನ, 2012ರಲ್ಲಿ ವಿಜಯ್‌ ಕುಮಾರ್‌ ಬೆಳ್ಳಿ ಹಾಗೂ ಗಗನ್‌ ನಾರಂಗ್‌ ಕಂಚಿನ ಪದಕಕ್ಕೆ ಕೊರಳೊಡ್ದಿದ್ದರು.

ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 8ನೇ ಮಹಿಳೆ

ಮನು ಭಾಕರ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 8ನೇ ಮಹಿಳಾ ಅಥ್ಲೀಟ್‌. 2000ದ ಸಿಡ್ನಿ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಭಾರತದ ಪರ ಮೊದಲ ಪದಕ (ಕಂಚು) ಗೆದ್ದಿದ್ದರು. 2012ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್‌ (ಕಂಚು), ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ (ಕಂಚು), 2016ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು (ಬೆಳ್ಳಿ), ಕುಸ್ತಿಯಲ್ಲಿ ಸಾಕ್ಷಿ ಮಲಿಕ್‌ (ಕಂಚು), 2020ರಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (ಬೆಳ್ಳಿ), ಬ್ಯಾಡ್ಮಿಂಟನ್‌ನಲ್ಲಿ ಸಿಂಧು (ಕಂಚು), ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್‌ (ಕಂಚು) ಪದಕ ಗೆದ್ದಿದ್ದರು. ಸಿಂಧು ಮಾತ್ರ 2 ಒಲಿಂಪಿಕ್ಸ್‌ ಪದಕ ಜಯಿಸಿದ್ದಾರೆ.

1996ರ ಬಳಿಕ ಭಾರತಕ್ಕೆ ಪ್ರತಿ ಒಲಿಂಪಿಕ್ಸ್‌ನಲ್ಲೂ ಪದಕ

ಭಾರತ 1996ರ ಬಳಿಕ ಪ್ರತಿ ಒಲಿಂಪಿಕ್ಸ್‌ನಲ್ಲೂ ಕನಿಷ್ಠ ಒಂದು ಪದಕವನ್ನಾದರೂ ಗೆದ್ದ ಸಾಧನೆ ಮಾಡಿದೆ. 1980ರಲ್ಲಿ 1 ಪದಕ ಗೆದ್ದಿದ್ದ ಭಾರತ ಬಳಿಕ 1984, 1988, 1992ರಲ್ಲಿ ಪದಕ ಗೆಲ್ಲಲು ವಿಫಲವಾಗಿತ್ತು. ಆದರೆ 1996, 2000, 2004ರ ಒಲಿಂಪಿಕ್ಸ್‌ಗಳಲ್ಲಿ ತಲಾ 1 ಪದಕ ಜಯಿಸಿತ್ತು. 2008ರಲ್ಲಿ ಮೂರು, 2012ರಲ್ಲಿ ಆರು ಹಾಗೂ 2016ರಲ್ಲಿ 2 ಪದಕ ತನ್ನದಾಗಿಸಿಕೊಂಡಿದ್ದ ಭಾರತ, ಕಳೆದ ಬಾರಿ ಸಾರ್ವಕಾಲಿಕ ಶ್ರೇಷ್ಠ 7 ಪದಕ ಜಯಿಸಿತ್ತು.

12 ವರ್ಷಗಳ ಪದಕ ಬರ ನೀಗಿಸಿದ ಮನು ಭಾಕರ್‌

ಭಾರತ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಕಳೆದ 12 ವರ್ಷಗಳಿಂದ ಎದುರಿಸುತ್ತಿದ್ದ ಪದಕ ಬರವನ್ನು ಮನು ನೀಗಿಸಿದರು. 2012ರಲ್ಲಿ ವಿಜಯ್‌ ಕುಮಾರ್‌ ಬೆಳ್ಳಿ, ಗಗನ್‌ ನಾರಂಗ್‌ ಕಂಚು ಗೆದ್ದಿದ್ದರು. ಆ ಬಳಿಕ ಕಳೆದೆರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲಲು ಶೂಟರ್‌ಗಳು ವಿಫಲರಾಗಿದ್ದರು.