ನೀರಜ್‌-ಮನು ನಡುವೆ ಶುರುವಾಯ್ತಾ ಲವ್‌: ಸಾಮಾಜಿಕ ತಾಣದಲ್ಲಿ ಭಾರಿ ಚರ್ಚೆ, ವಿಡಿಯೋ ವೈರಲ್‌!

| Published : Aug 13 2024, 12:54 AM IST / Updated: Aug 13 2024, 04:12 AM IST

ಸಾರಾಂಶ

ಮನು ಜೊತೆ ನೀರಜ್ ಆಪ್ತವಾಗಿ ಮಾತನಾಡುತ್ತಿರುವ ವಿಡಿಯೋ ವೈರಲ್‌. ಮನು ಭಾಕರ್‌ರ ತಾಯಿ ಕೂಡ ನೀರಜ್‌ರ ಜೊತೆ ಮಾತನಾಡುತ್ತಿರುವ ವಿಡಿಯೋ ಸಹ ವೈರಲ್‌ ಆಗಿದೆ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಇಬ್ಬರು ತಾರಾ ಕ್ರೀಡಾಪಟುಗಳಾದ ನೀರಜ್‌ ಚೋಪ್ರಾ ಹಾಗೂ ಮನು ಭಾಕರ್‌ ನಡುವೆ ಪ್ರೀತಿ ಮೂಡಿದೆಯೇ? ಹೀಗೊಂದು ವಿಷಯ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಇದಕ್ಕೆ ಕಾರಣ, ಒಲಿಂಪಿಕ್‌ ಗೇಮ್ಸ್‌ ಮುಕ್ತಾಯಗೊಂಡ ಬಳಿಕ ಪ್ಯಾರಿಸ್‌ನಲ್ಲಿ ರಿಲಾಯನ್ಸ್‌ ಸಂಸ್ಥೆಯ ಇಂಡಿಯಾ ಹೌಸ್‌ನಲ್ಲಿ ನೀರಜ್‌ ಹಾಗೂ ಮನು ಇಬ್ಬರು ಬಹಳ ಸಮಯ ಒಟ್ಟಿಗೆ ನಿಂತು ಬಹಳ ಆಪ್ತವಾಗಿ ಮಾತನಾಡುತ್ತಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.ಇವರಿಬ್ಬರ ನಡುವಿನ ಮಾತುಕತೆ ವೇಳೆ ಅಲ್ಲಿದ್ದ ಅನೇಕ ಅಥ್ಲೀಟ್‌ಗಳು ಇವರಿಬ್ಬರನ್ನು ಬೆರಗು ಕಣ್ಣಿನಿಂದ ನೋಡುತ್ತಾ ನಿಂತಿದ್ದರು.

 ಅಲ್ಲದೇ ಮನು ಭಾಕರ್‌ರ ತಾಯಿ ಕೂಡ ನೀರಜ್‌ರ ಜೊತೆ ಮಾತನಾಡುತ್ತಿರುವ ವಿಡಿಯೋ ಸಹ ವೈರಲ್‌ ಆಗಿದ್ದು, ತಮ್ಮ ತಲೆಯ ಮೇಲೆ ನೀರಜ್‌ರ ಕೈ ಇಡಿಸಿಕೊಂಡು ಏನೋ ಪ್ರಮಾಣ ಮಾಡಿಸಿಕೊಳ್ಳುವ ರೀತಿ ಕಂಡು ಬರುತ್ತದೆ. ಈ ದೃಶ್ಯಗಳನ್ನು ಅಲ್ಲಿದ್ದವರು ಬಹಳ ಕುತೂಹಲದಿಂದ ವೀಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈದ್ಯರನ್ನು ಕಾಣಲು ಜರ್ಮನಿಗೆ ತೆರಳಿದ ಚೋಪ್ರಾ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ, ಅಲ್ಲಿಂದ ನೇರವಾಗಿ ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಟೋಕಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌, ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ವೈದ್ಯರನ್ನು ಕಾಣಲು ಜರ್ಮನಿಗೆ ತೆರಳಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. 

ಇನ್ನು ಒಂದು ತಿಂಗಳ ಕಾಲ ನೀರಜ್‌ ಜರ್ಮನಿಯಲ್ಲೇ ಇರಲಿದ್ದಾರೆ ಎಂದು ಗೊತ್ತಾಗಿದೆ. ಒಲಿಂಪಿಕ್ಸ್‌ಗೂ ಮೊದಲು ನೀರಜ್‌ ಜರ್ಮನಿಗೆ ತೆರಳಿ ವೈದ್ಯರ ಬಳಿ ಸಮಾಲೋಚಿಸಿದ್ದರು. ಅಲ್ಲಿಯೇ ಕೆಲ ಕಾಲ ಅಭ್ಯಾಸ ನಿರತರಾಗಿದ್ದರು. ಈ ಬಾರಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.