ಸಾರಾಂಶ
ಚೆನ್ನೈ: ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿದ್ದ ತಾರಾ ಶೂಟರ್ ಮನು ಭಾಕರ್ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಹೆಸರನ್ನು ಈವರೆಗೂ ಕೇಳಿರಲಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದಾರೆ. ಹರ್ಯಾಣದವರಾದ ಮನು ಮಂಗಳವಾರ ಚೆನ್ನೈನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಅವರಿಗೆ ಆಯೋಜಕರು ಕೆಲ ರ್‍ಯಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಿದ್ದಾರೆ. ಮಹಾಬಲಿಪುರಂ(ತಮಿಳುನಾಡಿನ ನಗರ), ಮೀನಾಕ್ಷಿ ದೇಗುಲ, ಮುಖ್ಯಮಂತ್ರಿ ಸ್ಟಾಲಿನ್‌ರ ಹೆಸರು ಹೇಳಿ, ಈ ಹೆಸರನ್ನುಗಳನ್ನು ಎಂದಾದರೂ ಕೇಳಿದ್ದೀರಾ ಎಂದು ಮನುಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಮನು ಇಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ನಟ ವಿಜಯ್, ಚೆಸ್ ಪಟು ಪ್ರಜ್ಞಾನಂದ ಬಗ್ಗೆ ಕೇಳಿದಾಗ ಗೊತ್ತಿದೆ ಎಂದು ಮನು ಪ್ರತಿಕ್ರಿಯಿಸಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಒಲಿಂಪಿಕ್ಸ್ ಬಳಿಕ ವಿನೇಶ್ ಬ್ರಾಂಡ್ ಮೌಲ್ಯ ಹೆಚ್ಚಳ
ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದ ಹೊರತಾಗಿಯೂ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಬ್ರಾಂಡ್ ಮೌಲ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಪ್ರತಿ ಜಾಹೀರಾತಿಗೆ ₹25 ಲಕ್ಷ ದರ ನಿಗದಿಪಡಿಸುತ್ತಿದ್ದರು. ಆದರೆ ಈಗ ಪ್ರತಿ ಜಾಹೀರಾತುಗಳ ಮೂಲಕ ಅವರು ₹75 ಲಕ್ಷರಿಂದ ₹1 ಕೋಟಿ ವರೆಗೂ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಶೂಟರ್ ಮನು ಭಾಕರ್ ಜಾಹೀರಾತು ಮೌಲ್ಯ ಕೂಡಾ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.