ಬಾಕ್ಸಿಂಗ್‌ನಲ್ಲಿ ರಾಜ್ಯ ತಂಡವನ್ನು ಕಿರಿಯರ ವಿಭಾಗದಲ್ಲಿ ಸ್ಪರ್ಧಿಸುವ ಹಂತದಲ್ಲಿದ್ದಾಗ ಮನುಗೆ ಬಾಕ್ಸಿಂಗ್‌ ಬೋರ್‌ ಆಯಿತು. ತಮ್ಮ 14ನೇ ವಯಸ್ಸಿನಲ್ಲಿ ಶೂಟಿಂಗ್‌ನತ್ತ ಮುಖ ಮಾಡಿದರು.

ಪ್ಯಾರಿಸ್‌: ಹರ್ಯಾಣದ ಝಾಝರ್‌ನಲ್ಲಿ 2002ರಲ್ಲಿ ಜನಿಸಿದ ಮನು, ಶಾಲಾ ದಿನಗಳಿಂದಲೂ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಟೆನಿಸ್‌, ಮಾರ್ಷಲ್‌ ಆರ್ಟ್ಸ್‌, ಬಾಕ್ಸಿಂಗ್‌ ಹೀಗೆ ಹಲವು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದರು. 

ಬಾಕ್ಸಿಂಗ್‌ನಲ್ಲಿ ರಾಜ್ಯ ತಂಡವನ್ನು ಕಿರಿಯರ ವಿಭಾಗದಲ್ಲಿ ಸ್ಪರ್ಧಿಸುವ ಹಂತದಲ್ಲಿದ್ದಾಗ ಮನುಗೆ ಬಾಕ್ಸಿಂಗ್‌ ಬೋರ್‌ ಆಯಿತು. ತಮ್ಮ 14ನೇ ವಯಸ್ಸಿನಲ್ಲಿ ಶೂಟಿಂಗ್‌ನತ್ತ ಮುಖ ಮಾಡಿದರು. ಮನು ಅವರ ತಂದೆ 1.5 ಲಕ್ಷ ಖರ್ಚು ಮಾಡಿ ಪಿಸ್ತೂಲ್‌ ತೆಗೆದುಕೊಟ್ಟರು. 

ಆ ಬಳಿಕ ತಮ್ಮ 16ನೇ ವಯಸ್ಸಿನಲ್ಲೇ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ಮನು, 2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. 17ನೇ ವಯಸ್ಸಿನಲ್ಲೇ ಒಲಿಂಪಿಕ್ಸ್‌ ಕೋಟಾ ಪಡೆದು 19ನೇ ವಯಸ್ಸಿನಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮನು, ಈ ವರೆಗೂ ವಿಶ್ವಕಪ್‌ಗಳಲ್ಲಿ 9 ಚಿನ್ನ ಸೇರಿ ಒಟ್ಟು 11 ಪದಕ ಗೆದ್ದಿದ್ದಾರೆ. 2022ರ ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದರು.

ಇಷ್ಟೆಲ್ಲಾ ಸಾಧನೆ ಮಾಡಿದರೂ, ಒಂದು ವರ್ಷದ ಹಿಂದೆ ಮನುಗೆ ಶೂಟಿಂಗ್‌ ಸಾಕು ಎನಿಸಿತ್ತಂತೆ. ಉತ್ತಮ ಲಯದಲ್ಲೇ ಇದ್ದರೂ, ಶೂಟಿಂಗ್‌ ಒಂದು ರೀತಿ ಕೆಲಸದಂತೆ ಆಗಿತ್ತು ಎನ್ನುವ ಕಾರಣಕ್ಕೆ ಕ್ರೀಡೆಯಿಂದ ದೂರ ಉಳಿದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಬಗ್ಗೆಯೂ ಚಿಂತಿಸಿದ್ದರಂತೆ. ಆದರೆ ಅವರ ಹಣೆಯಲ್ಲಿ ಒಲಿಂಪಿಕ್ಸ್‌ ಪದಕ ಗೆಲ್ಲಬೇಕು ಎಂದು ಬರೆದಿತ್ತು.