ಸಾರಾಂಶ
ಮೆಲ್ಬರ್ನ್: 2017ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಮೈದಾನದಲ್ಲಿ ತಮ್ಮನ್ನು ಹಂಗಿಸಿದ್ದಕ್ಕೆ ಆಸ್ಟ್ರೇಲಿಯಾದ ತಾರಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರು.
ಇದನ್ನು ಸ್ವತಃ ಮ್ಯಾಕ್ಸ್‌ವೆಲ್ ಅವರು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್, ‘2021ರಲ್ಲಿ ಆರ್‌ಸಿಬಿ ಸೇರ್ಪಡೆಗೊಂಡ ಬಳಿಕ ವಿರಾಟ್ ಕೊಹ್ಲಿಯನ್ನು ಫಾಲೋ ಮಾಡಲು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಹೆಸರನ್ನು ಹುಡುಕಾಡುತ್ತಿದ್ದೆ. ಆದರೆ ಕೊಹ್ಲಿ ಹೆಸರು ಕಾಣಿಸುತ್ತಿರಲಿಲ್ಲ. ಕೊಹ್ಲಿ ಬ್ಲಾಕ್ ಮಾಡಿರುವುದಾಗಿ ಬೇರೊಬ್ಬರು ತಿಳಿಸಿದರು.
ಬಳಿಕ ಈ ಬಗ್ಗೆ ಕೊಹ್ಲಿ ಬಳಿ ವಿಚಾರಿಸಿದಾಗ, 2017ರ ಟೆಸ್ಟ್ ಸರಣಿ ವೇಳೆ ಹಂಗಿಸಿದ್ದಕ್ಕೆ ಬ್ಲಾಕ್ ಮಾಡಿರುವುದಾಗಿ ತಿಳಿಸಿದರು.
ಬಳಿಕ ಅವರೇ ಅನ್‌ಬ್ಲಾಕ್ ಮಾಡಿದರು’ ಎಂದಿದ್ದಾರೆ. ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದ ಫೀಲ್ಡಿಂಗ್ ವೇಳೆ ಕೊಹ್ಲಿ ಭುಜದ ನೋವಿಗೆ ತುತ್ತಾಗಿದ್ದರು. ಇದನ್ನು ಅಣಕಿಸಿದ್ದ ಮ್ಯಾಕ್ಸ್‌ವೆಲ್, ತಮ್ಮ ಭುಜಕ್ಕೆ ಕೈ ಇಟ್ಟು ನೋವಾದಂತೆ ನಟಿಸಿದ್ದರು. ಇದು ಕೊಹ್ಲಿಯನ್ನು ಕೆರಳಿಸಿತ್ತು. 2021ರಲ್ಲಿ ₹14.25 ಕೋಟಿಗೆ ಮ್ಯಾಕ್ಸ್‌ವೆಲ್ ಆರ್‌ಸಿಬಿ ಸೇರ್ಪಡೆಗೊಂಡಿದ್ದಾರೆ. ಬಳಿಕ ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ಬಹಳ ಆತ್ಮೀಯರಾಗಿದ್ದಾರೆ.