ಸಾರಾಂಶ
ಅಹಮದಾಬಾದ್: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿದ್ದು, ‘ಸಿ’ ಗುಂಪಿನಲ್ಲಿ 4 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಶನಿವಾರ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಅರುಣಾಚಲ 43.2 ಓವರ್‌ಗಳಲ್ಲಿ 166 ರನ್‌ಗೆ ಆಲೌಟಾಯಿತು. ಅಭಿನವ್ ಸಿಂಗ್ ತಂಡದ ಪರ ಏಕಾಂಗಿ ಹೋರಾಟ ನಡೆಸಿ ಔಟಾಗದೆ 71 ರನ್ ಸಿಡಿಸಿದರು. ವಿ.ಕೌಶಿಕ್ ಹಾಗೂ ಹಾರ್ದಿಕ್ ರಾಜ್ ತಲಾ 4 ವಿಕೆಟ್ ಕಿತ್ತರು. ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ 14.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ನಾಯಕ ಮಯಾಂಕ್ 45 ಎಸೆತಗಳಲ್ಲಿ ಔಟಾಗದೆ 100 ರನ್ ಸಿಡಿಸಿದರು. ಇದು ಅವರ ಸತತ 2ನೇ ಶತಕ. ಅಭಿನವ್ ಮನೋಹರ್ 41 ಎಸೆತಗಳಲ್ಲಿ 66 ರನ್ ಬಾರಿಸಿದರು. ಡಿ.31ರಂದು ರಾಜ್ಯ ತಂಡ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.
ಐಸಿಸಿ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿ ಶ್ರೇಯಾಂಕ
ದುಬೈ: ಐಸಿಸಿ ವರ್ಷದ ಮಹಿಳಾ ಉದಯೋನ್ಮುಕ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕ ಪಾಟೀಲ್ ನಾಮನಿರ್ದೇಶನಗೊಂಡಿದ್ದಾರೆ. ಶನಿವಾರ ಪ್ರಶಸ್ತಿ ರೇಸ್‌ನಲ್ಲಿರುವ ನಾಲ್ವರು ಆಟಗಾರ್ತಿಯರ ಪಟ್ಟಿಯನ್ನು ಐಸಿಸಿ ಪ್ರಕಟಿಸಿತು. ದ.ಆಫ್ರಿಕಾದ ಅನ್ನೇರಿ ಡೆರ್ಕ್‌ಸೆನ್, ಸ್ಕಾಟ್ಲೆಂಡ್‌ನ ಸಾಸ್ಕಿಯಾ ಹೊರ್ಲೆ ಹಾಗೂ ಐರ್ಲೆಂಡ್‌ನ ಫ್ರೇಯಾ ಸಾರ್ಗೆಂಟ್ ಕೂಡಾ 22 ವರ್ಷದ ಶ್ರೇಯಾಂಕ ಜೊತೆ ರೇಸ್‌ನಲ್ಲಿದ್ದಾರೆ.
ಇನ್ನು, ವರ್ಷದ ಪುರುಷ ಉದಯೋನ್ಮುಕ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಪಾಕಿಸ್ತಾನ ಸೈಮ್ ಅಯೂಬ್, ಶ್ರೀಲಂಕಾದ ಕಮಿಂಡು, ವೆಸ್ಟ್‌ಇಂಡೀಸ್‌ನ ಶಾಮರ್, ಇಂಗ್ಲೆಂಡ್‌ನ ಗಸ್ ಆಟ್ಕಿನ್ಸನ್ ಇದ್ದಾರೆ.