ಸಾರಾಂಶ
ಆ್ಯಂಟಿಗಾ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಸತತ 2ನೇ ಗೆಲುವು ಸಾಧಿಸಿದ್ದು, ಸೂಪರ್-8 ಹಂತದ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಒಮಾನ್ ವಿರುದ್ಧ 7 ವಿಕೆಟ್ ಗೆಲುವು ಲಭಿಸಿತು.
ಈ ಗೆಲುವಿನೊಂದಿಗೆ ಸ್ಕಾಟ್ಲೆಂಡ್ ‘ಬಿ’ ಗುಂಪಿನಲ್ಲಿ 3 ಪಂದ್ಯಗಳಲ್ಲಿ 5 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಒಮಾನ್ ಹ್ಯಾಟ್ರಿಕ್ ಸೋಲಿನೊಂದಿಗೆ ಕೊನೆ ಸ್ಥಾನದಲ್ಲೇ ಬಾಕಿಯಾಯಿತು.ಮೊದಲು ಬ್ಯಾಟ್ ಮಾಡಿದ ಒಮಾನ್ 20 ಓವರಲ್ಲಿ 7 ವಿಕೆಟ್‌ಗೆ 150 ರನ್ ಕಲೆಹಾಕಿತು. ಭಾರತ ಮೂಲದವರಾದ ಪ್ರತೀಕ್ ಅಠಾವಳೆ 40 ಎಸೆತಗಳಲ್ಲಿ 54, ಅಯಾನ್ ಖಾನ್ ಔಟಾಗದೆ 41 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ನಾಯಕ ಆಖಿಬ್ ಇಲ್ಯಾಸ್ 6 ಎಸೆತಗಳಲ್ಲಿ 16 ರನ್ ಕೊಡುಗೆ ನೀಡಿದರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್, ಸ್ಫೋಟಕ ಆಟವಾಡಿ ಕೇವಲ 13.1 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸಿ 20 ಎಸೆತಗಳಲ್ಲಿ 21 ರನ್ ಸಿಡಿಸಿದರೆ, ಬ್ರೆಂಡಾನ್ ಮೆಕ್‌ಮುಲೆನ್ 31 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 61 ರನ್ ಚಚ್ಚಿದರು. ಮೈಕಲ್ ಜಾನ್ಸ್ 16, ಮ್ಯಾಥ್ಯೂ ಕ್ರಾಸ್ ಔಟಾಗದೆ 15 ರನ್ ಕೊಡುಗೆ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಸ್ಕೋರ್: ಒಮಾನ್ 20 ಓವರಲ್ಲಿ 150/7 (ಪ್ರತೀಕ್ 54, ಅಯಾನ್ 41*, ಸಫ್ಯಾನ್ 2-40), ಸ್ಕಾಟ್ಲೆಂಡ್ 13.1 ಓವರಲ್ಲಿ 153/3 (ಮೆಗ್‌ಮುಲನ್ 61*, ಮುನ್ಸಿ 41, ಬಿಲಾಲ್ 1-12) ಪಂದ್ಯಶ್ರೇಷ್ಠ: ಬ್ರೆಂಡಾನ್ ಮೆಕ್‌ಮುಲನ್.