ಸಾರಾಂಶ
ಚಿನ್ನದ ಪದಕದ ಆಕಾಂಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಫ್ರಾನ್ಸ್‌ನ ಲುಕಾಸ್ ಮಾಜುರ್ ವಿರುದ್ಧ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಪ್ಯಾರಿಸ್ : ಈ ಬಾರಿ ಚಿನ್ನದ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ತಾರಾ ಶಟ್ಲರ್ ಸುಹಾಸ್ ಯತಿರಾಜ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸೋಮವಾರ ಪುರುಷರ ಎಸ್‌ಎಲ್4 ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ 41 ವರ್ಷದ ಸುಹಾಸ್ ಫ್ರಾನ್ಸ್‌ನ ಲುಕಾಸ್ ಮಾಜುರ್ ವಿರುದ್ಧ 9-21, 13-21ರಲ್ಲಿ ಸೋಲನುಭವಿಸಿದರು.
ಸೆಮಿಫೈನಲ್‌ನಲ್ಲಿ ಭಾರತದವರೇ ಆದ ಸುಕಾಂತ್ ಕದಂ ವಿರುದ್ಧ ಜಯಗಳಿಸಿದ್ದ ಸುಹಾಸ್‌ಗೆ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ. ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಬೆಳ್ಳಿ ಪದಕ ಗೆದ್ದಿದ್ದರು. ಟೋಕಿಯೋದಲ್ಲೂ ಲುಕಾಸ್ ವಿರುದ್ಧವೇ ಫೈನಲ್‌ನಲ್ಲಿ ಸೋಲು ಎದುರಾಗಿತ್ತು. ಈ ಬಾರಿ ಸೇಡು ತೀರಿಸಿ, ಚಿನ್ನ ಗೆಲ್ಲುವ ಸುಹಾಸ್ ಕನಸು ನನಸಾಗಲಿಲ್ಲ.