ಸಾರಾಂಶ
ನವದೆಹಲಿ: 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 4ನೇ ಗೆಲುವು ಸಾಧಿಸಿದೆ. ಗುರುವಾರ ಯುಪಿ ವಾರಿಯರ್ಸ್ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ 42 ರನ್ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ 6 ಪಂದ್ಯಗಳಲ್ಲಿ 8 ಅಂಕ ಸಂಪಾದಿಸಿದ ಮುಂಬೈ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ. ಅತ್ತ ಯುಪಿ ವಾರಿಯರ್ಸ್ ತಂಡ 6 ಪಂದ್ಯಗಳಲ್ಲಿ 4ನೇ ಸೋಲು ಕಂಡು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಬಾಕಿಯಾಗಿದೆ.ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು. ಶೀವರ್ ಬ್ರಂಟ್ 31 ಎಸೆತಗಳಲ್ಲಿ 45 ರನ್ ಸಿಡಿಸಿದರೆ, ಅಮೇಲಿಯಾ ಕೇರ್ 23 ಎಸೆತಗಳಲ್ಲಿ 39 ರನ್ ಚಚ್ಚಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ 33 ರನ್ ಕೊಡುಗೆ ಜೊತೆಗೆ ಶ್ರೀನಿವಾಸನ್ ಸಜನಾ ಕೊನೆಯಲ್ಲಿ ಗಳಿಸಿದ 22 ರನ್ ತಂಡವನ್ನು 160ರ ಗಡಿ ತಲುಪಿಸಿತು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ತಂಡ 20 ಓವರಲ್ಲಿ 9 ವಿಕೆಟ್‌ಗೆ 118 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡಕ್ಕೆ ಅಲ್ಪ ಆಸರೆಯಾಗಿದ್ದು ದೀಪ್ತಿ ಶರ್ಮಾ. ಅವರು ಕೊನೆಯಲ್ಲಿ ಅಬ್ಬರಿಸಿ 36 ಎಸೆತಗಳಲ್ಲಿ ಔಟಾಗದೆ 53 ರನ್ ಸಿಡಿಸಿದರೂ ತಂಡಕ್ಕೆ ಗೆಲುವು ಲಭಿಸಲಿಲ್ಲ. ಸೈಕಾ ಇಶಾಕ್ 3, ಶೀವರ್ ಬ್ರಂಟ್ 2 ವಿಕೆಟ್ ಕಬಳಿಸಿದರು.