ಸಾರಾಂಶ
ಮಿನಿ ಒಲಿಂಪಿಕ್ಸ್ ಪರಿಕಲ್ಪನೆ ಹುಟ್ಟಿದ್ದು ಹೇಗೆ?, ಉದ್ದೇಶ, ಇಷ್ಟು ದೊಡ್ಡ ಮಟ್ಟದ ಕ್ರೀಡಾಕೂಟ ಆಯೋಜಿಸುವಾಗ ಬೇಕಿರುವ ಸಿದ್ಧತೆ, ಹಣಕಾಸಿನ ವ್ಯವಸ್ಥೆ, ವಿವಿಧ ಕ್ರೀಡಾ ಸಂಸ್ಥೆಗಳ ಸಹಕಾರ, ಸರ್ಕಾರ ಹಾಗೂ ಕ್ರೀಡಾ ಇಲಾಖೆಯ ಪಾತ್ರ ಹೀಗೆ ಹಲವು ವಿಚಾರಗಳ ಬಗ್ಗೆ ಗೋವಿಂದರಾಜು ವಿವರವಾಗಿ ಹಂಚಿಕೊಂಡಿದ್ದಾರೆ.
ಸ್ಪಂದನ್ ಕಣಿಯಾರ್ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ (ಕೆಒಎ) 3ನೇ ಆವೃತ್ತಿಯ ಮಿನಿ ಒಲಿಂಪಿಕ್ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ರಾಜ್ಯದ ಮೂಲೆ ಮೂಲೆಯಿಂದ 5000 ಮಕ್ಕಳು ಪಾಲ್ಗೊಂಡಿದ್ದ ಕ್ರೀಡಾಕೂಟವು ಭವಿಷ್ಯದಲ್ಲಿ ಕ್ರೀಡಾ ತಾರೆಗಳಾಗಿ ಮಿನುಗಬಲ್ಲ ಕೆಲ ಕ್ರೀಡಾಪಟುಗಳನ್ನು ಅನಾವರಣಗೊಳಿಸಿದ್ದರೆ ಅಚ್ಚರಿಯಿಲ್ಲ. ಮಿನಿ ಒಲಿಂಪಿಕ್ಸ್ ಎನ್ನುವ ಪರಿಕಲ್ಪನೆ ಹುಟ್ಟಿದ್ದು ಹೇಗೆ?, ಕ್ರೀಡಾಕೂಟದ ಉದ್ದೇಶ, ಇಷ್ಟು ದೊಡ್ಡ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವಾಗ ಬೇಕಿರುವ ಸಿದ್ಧತೆ, ಹಣಕಾಸಿನ ವ್ಯವಸ್ಥೆ, ವಿವಿಧ ಕ್ರೀಡಾ ಸಂಸ್ಥೆಗಳ ಸಹಕಾರ, ಸರ್ಕಾರ ಹಾಗೂ ಕ್ರೀಡಾ ಇಲಾಖೆಯ ಪಾತ್ರ ಹೀಗೆ ಹಲವು ವಿಚಾರಗಳ ಬಗ್ಗೆ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಹಾಗೂ ಏಷ್ಯಾ ಬಾಸ್ಕೆಟ್‌ಬಾಲ್ ಫೆಡರೇಶನ್ (ಫಿಬಾ)ನ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರು ‘ಕನ್ನಡಪ್ರಭ’ದೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ.
* ಮಿನಿ ಒಲಿಂಪಿಕ್ಸ್ ಎನ್ನುವ ಪರಿಕಲ್ಪನೆ ಹುಟ್ಟಿದ್ದು ಯಾವಾಗ, ಏಕೆ?
2008ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ಗೆ ನಾನು ರಾಜ್ಯದ ಪ್ರತಿನಿಧಿಯಾಗಿ ಹೋಗಿದ್ದೆ. ಅಲ್ಲಿ 13, 14 ವರ್ಷದ ಸ್ಥಳೀಯ ಕ್ರೀಡಾಪಟುಗಳು ಜಿಮ್ನಾಸ್ಟಿಕ್ಸ್ ಸೇರಿ ಕೆಲ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದು ನೋಡಿ ಬೆರಗಾದೆ. ಇಷ್ಟು ಸಣ್ಣ ವಯಸ್ಸಿನ ಮಕ್ಕಳು ಒಲಿಂಪಿಕ್ ಪದಕ ಗೆಲ್ಲಲು ಕಾರಣವೇನಿರಬಹುದು ಎಂದು ಅವಲೋಕಿಸಿದಾಗ, ನನಗೆ ಗೊತ್ತಾಗಿದ್ದು ಬಾಲ್ಯದಲ್ಲೇ ಮಕ್ಕಳನ್ನು ವೃತ್ತಿಪರ ಕ್ರೀಡೆಯತ್ತ ಕರೆತರಬೇಕು. ಗುಣಮಟ್ಟದ ತರಬೇತಿ ನೀಡಬೇಕು ಎಂದು. ಆಗಲೇ ನಮ್ಮ ರಾಜ್ಯದಲ್ಲಿ ಇಂಥ ಯೋಜನೆ ಜಾರಿಗೆ ತರಬೇಕು ಎಂದು ನಿರ್ಧರಿಸಿದೆ.
ಸುಮಾರು 10 ವರ್ಷಗಳ ಕಾಲ ಬೇರೆ ಬೇರೆ ಕ್ರೀಡಾಕೂಟಗಳನ್ನು ವೀಕ್ಷಿಸಿ, ಬೃಹತ್ ಕ್ರೀಡಾಕೂಟ ಆಯೋಜನೆಗೆ ಬೇಕಿರುವ ರೂಪುರೇಷೆ ಸಿದ್ಧಪಡಿಸಿದೆ. ಕೊನೆಗೂ 2020ರಲ್ಲಿ ‘ಮಿನಿ ಒಲಿಂಪಿಕ್ಸ್’ ಎಂಬ ಹೆಸರಿನಡಿ ಕ್ರೀಡಾಕೂಟವನ್ನು ಆರಂಭಿಸಿದೆವು. ಭಾರತದಲ್ಲೇ ಅಂಡರ್-14 ವಿಭಾಗದಲ್ಲಿ ರಾಜ್ಯ ಮಟ್ಟದ ಮಿನಿ ಒಲಿಂಪಿಕ್ಸ್ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ.
* ಮಿನಿ ಒಲಿಂಪಿಕ್ಸ್ ಆಯೋಜನೆ ಹಿಂದಿನ ಉದ್ದೇಶವೇನು?
ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಪದಕ ಗೆಲ್ಲಬೇಕು. ಅದಕ್ಕೆ ಮೊದಲ ವೇದಿಕೆಯೇ ಈ ಮಿನಿ ಒಲಿಂಪಿಕ್ಸ್. ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವುದು, ಕ್ರೀಡೆಯತ್ತ ಅವರನ್ನು ಸೆಳೆಯುವುದು. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ, ಅವಕಾಶಗಳನ್ನು ಕಲ್ಪಿಸುವುದೇ ಈ ಕ್ರೀಡಾಕೂಟದ ಧ್ಯೇಯ. ಗುಲ್ಬರ್ಗಾ, ರಾಯಚೂರು, ಚಾಮರಾಜನಗರ ಹೀಗೆ ಯಾವುದೋ ಜಿಲ್ಲೆಯ ಗ್ರಾಮವೊಂದರ ಕ್ರೀಡಾಪಟು ತಾನು ಮಿನಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಈ ರೀತಿಯ ವ್ಯವಸ್ಥೆ ಇತ್ತು, ಸ್ಪರ್ಧೆ ಹಾಗಿತ್ತು, ಹೀಗಿತ್ತು ಎಂದು ತನ್ನ ಸಹಪಾಠಿಗಳಿಗೆ ಹೇಳಿದಾಗ, ಮತ್ತಷ್ಟು ಮಕ್ಕಳು ಕ್ರೀಡೆಯತ್ತ ಆಕರ್ಷಿತರಾಗುತ್ತಾರೆ. ಎಳೆಯ ಮನಸುಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿಯ ಬೀಜ ಬಿತ್ತುವುದೇ ಮಿನಿ ಒಲಿಂಪಿಕ್ಸ್‌ನ ಪ್ರಧಾನ ಉದ್ದೇಶ.
* ಇಷ್ಟು ದೊಡ್ಡ ಕ್ರೀಡಾಕೂಟ ಆಯೋಜಿಸುವಾಗ ಅಗತ್ಯವಿರುವ ಸಿದ್ಧತೆಗಳು ಏನೇನು?
ಕ್ರೀಡಾಕೂಟ ನಡೆಯುವ 4-5 ತಿಂಗಳು ಹಿಂದಿನಿಂದಲೇ ಸಿದ್ಧತೆ ಆರಂಭಗೊಳ್ಳಲಿದೆ. ಮೊದಲಿಗೆ ಕೆಒಎ ಜೊತೆಗಿರುವ ಎಲ್ಲಾ ರಾಜ್ಯ ಕ್ರೀಡಾ ಸಂಸ್ಥೆಗಳು, ಫೆಡರೇಶನ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವುಗಳ ಪದಾಧಿಕಾರಿಗಳ ಜೊತೆ ಸಭೆಗಳನ್ನು ನಡೆಸಿ ಕ್ರೀಡಾಕೂಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ಎಲ್ಲಾ ಕ್ರೀಡಾ ಸಂಸ್ಥೆ, ಫೆಡರೇಶನ್‌ಗಳು ತಮ್ಮ ಮನೆಯ ಕಾರ್ಯಕ್ರಮದಂತೆ ಈ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದ್ದಾರೆ. 5000 ಮಕ್ಕಳಿಗೆ ಊಟ, ವಸತಿ, ಪ್ರಯಾಣ, ಸ್ಥಳೀಯ ಓಡಾಟ, ಟ್ರ್ಯಾಕ್ ಸೂಟ್, ಪ್ರಮಾಣ ಪತ್ರ, ಬಹುಮಾನ ಹೀಗೆ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಖುಷಿಯಿಂದ ಮನೆಗಳಿಗೆ ಮರಳಬೇಕು. ಕ್ರೀಡೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಲು ಈ ಕ್ರೀಡಾಕೂಟ ಸ್ಫೂರ್ತಿಯಾಗಬೇಕು ಎನ್ನುವುದೇ ನಮ್ಮ ಆಶಯ. ಖಂಡಿತವಾಗಿಯೂ ಮಿನಿ ಒಲಿಂಪಿಕ್ಸ್ ರಾಜ್ಯ ಕ್ರೀಡಾ ಭವಿಷ್ಯದ ದಿಕ್ಸೂಚಿಯಾಗಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
* ರಾಜ್ಯ ಸರ್ಕಾರ, ಕ್ರೀಡಾ ಇಲಾಖೆಯ ಸಹಕಾರ ಹೇಗಿತ್ತು?
ರಾಜ್ಯ ಸರ್ಕಾರ ಈ ಕ್ರೀಡಾಕೂಟಕ್ಕೆ ತನ್ನ ಬಜೆಟ್‌ನಲ್ಲೇ ಅನುದಾನ ಘೋಷಿಸಿತ್ತು. 3 ಕೋಟಿ ರು. ನೆರವು ನೀಡಿ ಕ್ರೀಡಾಕೂಟ ಯಶಸ್ವಿಯಾಗಲು ಎಲ್ಲಾ ರೀತಿಯ ಸಹಕಾರ ಒದಗಿಸಿತು. ಈ ಹಿಂದಿನ 2 ಆವೃತ್ತಿಗಳನ್ನು ಆಯೋಜಿಸಿದಾಗ ಇದ್ದ ಸರ್ಕಾರಗಳೂ ಕ್ರೀಡಾಕೂಟ ಆಯೋಜನೆಗೆ ಸಂಪೂರ್ಣ ಸಹಕಾರ ನೀಡಿವೆ ಎನ್ನುವುದು ಬಹಳ ಖುಷಿಯ ವಿಚಾರ. ಕ್ರೀಡಾ ಇಲಾಖೆಯೂ ಪ್ರತಿ ಬಾರಿ ನಮ್ಮ ಕೈ ಬಲಪಡಿಸಿದೆ.
* ರಾಜ್ಯ ಒಲಿಂಪಿಕ್ ಸಂಸ್ಥೆಯ ಮುಂದಿನ ಯೋಜನೆಗಳೇನು?
ಮಿನಿ ಒಲಿಂಪಿಕ್ಸ್ ಅನ್ನು ಪ್ರತಿ ವರ್ಷ ಆಯೋಜಿಸಲು ನಿರ್ಧರಿಸಲಾಗಿದೆ. ಯಾವುದೇ ಯೋಜನೆಯಾಗಲಿ ಅದರಲ್ಲಿ ನಿರಂತರತೆ ಇದ್ದರಷ್ಟೇ ಅದು ಯಶಸ್ಸು ಕಾಣಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗಮನದಲ್ಲಿಟ್ಟುಕೊಂಡು ‘ಟಾರ್ಗೆಟ್ 28’ ಎನ್ನುವ ಕಾರ್ಯಕ್ರಮವನ್ನು ಪರಿಚಯಿಸಲು ತೀರ್ಮಾನಿಸಿದ್ದೇವೆ. ವಿವಿಧ ಕ್ರೀಡೆಗಳಲ್ಲಿ ಸುಮಾರು 100 ಕ್ರೀಡಾಪಟುಗಳನ್ನು ಗುರುತಿಸಿ ಅವರ ತರಬೇತಿಗೆ ವಾರ್ಷಿಕ 10 ಲಕ್ಷ ರು. ಆರ್ಥಿಕ ನೆರವು ಒದಗಿಸುವ ಗುರಿ ಇದೆ. ಈ ಯೋಜನೆಯ ಫಲವಾಗಿ ಕನಿಷ್ಠ 5-6 ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಇದಲ್ಲದೇ, ಖಾಸಗಿ ಸಂಸ್ಥೆಗಳು ಕ್ರೀಡಾಭಿವೃದ್ಧಿಗೆ ಕೈ ಜೋಡಿಸಬೇಕು.
ಈ ನಿಟ್ಟಿನಲ್ಲಿ ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರೊಂದಿಗೆ ಸಭೆ ನಡೆಸಿ, ಒಂದು 10 ಸಂಸ್ಥೆಗಳು ಬೇರೆ ಬೇರೆ ಕ್ರೀಡೆಗಳಿಗೆ ನೆರವು ಪಡೆಯಲು ಒಪ್ಪಂದ ಮಾಡಿಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ.
* ಮೂಲಸೌಕರ್ಯಗಳ ಅಭಿವೃದ್ಧಿ ಕಡೆಗೆ ಕೆಒಎ ಎಷ್ಟರ ಮಟ್ಟಿಗೆ ಗಮನ ನೀಡುತ್ತಿದೆ?
ರಾಜ್ಯದ ನಗರ ಭಾಗಗಳಲ್ಲಿ ಮೂಲಸೌಕರ್ಯ ಉತ್ತಮವಾಗಿದೆ. ಗ್ರಾಮೀಣ ಭಾಗಗಳಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ. ಇದೇ ಕಾರಣಕ್ಕಾಗಿ, ಪ್ರತಿ ವಲಯಕ್ಕೆ ವಾರ್ಷಿಕ ಬಜೆಟ್‌ನಲ್ಲಿ 250-300 ಕೋಟಿ ರು. ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಿದ್ದೇನೆ.
ಉದಾಹರಣೆಗೆ ಒಂದು ವರ್ಷ ಮೀಸಲಿಡುವ ಅನುದಾನದಿಂದ ಒಂದು ವಲಯದಲ್ಲಿ ಕ್ರೀಡಾಂಗಣ, ಹಾಸ್ಟೆಲ್‌ಗಳ ನಿರ್ಮಾಣ, ಉಪಕರಣಗಳ ಖರೀದಿ, ಕೋಚ್‌ಗಳ ನೇಮಕ ಹೀಗೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳಬಹುದು. ಆಗ ಸುತ್ತ ಮುತ್ತಲಿನ 7-8 ಜಿಲ್ಲೆಗಳ ಕ್ರೀಡಾಪಟುಗಳಿಗೆ ಅದರಿಂದ ಅನುಕೂಲವಾಗಲಿದೆ. ರಾಜ್ಯದಲ್ಲಿ ತುರ್ತಾಗಿ ಈ ಕೆಲಸ ಆಗಬೇಕಿದೆ.
* ಕ್ರೀಡೆ, ರಾಜಕೀಯ ಎರಡನ್ನೂ ಹೇಗೆ ನಿಭಾಯಿಸುತ್ತೀರಿ?
ಮೊದಲು ನಾನೊಬ್ಬ ಕ್ರೀಡಾಪಟು. ಬಾಲ್ಯದಲ್ಲಿ ಹಲವು ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದೆ. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಲ್ಲೂ ತೊಡಗಿಸಿಕೊಂಡ ಕಾರಣ ರಾಜಕೀಯದಲ್ಲಿ ಸಹಜವಾಗಿಯೇ ಆಸಕ್ತಿ ಮೂಡಿತು. ದಶಕಗಳಿಂದ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯನಾಗಿದ್ದೇನೆ. ಇದು ಸಾಧ್ಯವಾಗಲು ನನ್ನ ಕುಟುಂಬದ ಪಾತ್ರ ಬಹಳ ದೊಡ್ಡದು. ಕುಟುಂಬದ ಬೆಂಬಲವಿಲ್ಲದೆ ಯಾವುದೂ ಸಾಧ್ಯವಿಲ್ಲ.
ಈಗ ಹಾಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜವಾಬ್ದಾರಿಯೂ ನಿಭಾಯಿಸುತ್ತಿದ್ದೇನೆ. ನಾನು ಕ್ರೀಡಾ ಆಡಳಿತದಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೆಒಎ ಅಥವಾ ಫಿಬಾ ಏಷ್ಯಾಗೆ ಸಂಬಂಧಿಸಿದ ಕೆಲಸಗಳಿಗೆ ಸಮಯ ನೀಡಲು ಸಿಎಂ ಸದಾ ಅನುಮತಿ ನೀಡುತ್ತಾರೆ. ಅವರಿಗೆ ಧನ್ಯವಾದ ಹೇಳಲೇಬೇಕು.
* ನೀವು ಕ್ರೀಡಾಪಟುವಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುವುದಾದರೆ?
ನಾನು ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಹಲವು ಕ್ರೀಡೆಯಲ್ಲಿ ಸಕ್ರಿಯನಾಗಿದ್ದೆ. ಫುಟ್ಬಾಲ್, ಅಥ್ಲೆಟಿಕ್ಸ್, ಕ್ರಿಕೆಟ್ ಹೀಗೆ ಎಲ್ಲದರಲ್ಲೂ ಪಾಲ್ಗೊಳ್ಳುತ್ತಿದ್ದೆ. ನಮ್ಮ ಶಿಕ್ಷಕರಿಂದಲೂ ಉತ್ತೇಜನ ಸಿಗುತಿತ್ತು. 7ನೇ ಕ್ಲಾಸ್‌ನಲ್ಲಿದ್ದಾಗ ನನಗೆ ನನ್ನ ಶಾಲೆಯವರು ‘ಆಲ್ರೌಂಡರ್ ಕಪ್’ ನೀಡಿದ್ದರು. ಕ್ರೀಡೆಯಲ್ಲಿ ಮುಂದುವರಿಯಲು ಅದೇ ನನಗೆ ಮೊದಲ ಪ್ರೋತ್ಸಾಹ.
ಒಮ್ಮೆ ಬಾಸ್ಕೆಟ್‌ಬಾಲ್ ಕೋರ್ಟ್ ಪಕ್ಕದಲ್ಲಿ ಹೋಗುವಾಗ ಹಿರಿಯ ಆಟಗಾರರೊಬ್ಬರು ‘ಬಾಸ್ಕೆಟ್‌ಬಾಲ್ ಆಡುತ್ತೀಯಾ?’ ಎಂದು ಕೇಳಿದರು. ಮೊದಲ ಪ್ರಯತ್ನದಲ್ಲೇ ಚೆಂಡನ್ನು ಬಾಸ್ಕೆಟ್‌ಗೆ ಹಾಕಿದೆ. ಅಲ್ಲಿಂದಲೇ ಬಾಸ್ಕೆಟ್‌ಬಾಲ್ ಕಡೆಗೆ ಮನಸು ವಾಲಿತು. ಆನಂತರ ವಿವಿಧ ಹಂತಗಳನ್ನು ದಾಟಿ ಹಲವು ವರ್ಷಗಳ ಕಾಲ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದೆ. ಆದರೆ ವಿಧಿಯಾಟ, 20ನೇ ವಯಸ್ಸಿನಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡೆ. ನನ್ನ ಪಾಲಿಗೆ ಅದು ಪುನರ್ಜನ್ಮ. ಆದರೆ ನನ್ನಲ್ಲಿದ್ದ ಕ್ರೀಡಾಸಕ್ತಿಯನ್ನು ಗುರುತಿಸಿದ ಆಗಿನ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ(ಕೆಎಸ್‌ಬಿಬಿಎ)ಯ ಮುಖ್ಯಸ್ಥರಾಗಿದ್ದ ಎಂ.ಸಿ.ಶ್ರೀನಿವಾಸ್ ಅವರು ನನ್ನ 25-26ನೇ ವಯಸ್ಸಿನಲ್ಲೇ ನನ್ನನ್ನು ಕಾರ್ಯಕಾರಿ ಸಮಿತಿಯ ಸದಸ್ಯನನ್ನಾಗಿ ನೇಮಿಸಿದರು. ಕ್ರೀಡಾ ಆಡಳಿತಗಾರನಾಗಿ ಈಗ 40 ವರ್ಷ ಪೂರೈಸಿದ್ದೇನೆ.
ಭಾರತೀಯ ಬಾಸ್ಕೆಟ್‌ಬಾಲ್ ನನ್ನ ಕೊಡುಗೆಯನ್ನು ಪರಿಗಣಿಸಿ ಏಷ್ಯಾ ಬಾಸ್ಕೆಟ್‌ಬಾಲ್ ಫೆಡರೇಶನ್ (ಫಿಬಾ ಏಷ್ಯಾ)ನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಶನ್ (ಫಿಬಾ)ದ ಆಡಳಿತ ಮಂಡಳಿಯ ಸದಸ್ಯನೂ ಆಗಿದ್ದೇನೆ. ಈ ಎಲ್ಲಾ ಹುದ್ದೆಗಳನ್ನು ಪಡೆದ ಮೊದಲ ಭಾರತೀಯ ನಾನು. ಈ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ.
* ಭಾರತೀಯ ಕ್ರೀಡಾಳಿತದಲ್ಲಿ ನೀವು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ನಿಮಗೆ ತೃಪ್ತಿ ಇದೆಯೇ?
ನಾನು ಭಾರತೀಯ ಕ್ರೀಡೆಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಕರ್ನಾಟಕದ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರು ನನಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಇದಕ್ಕಿಂತ ಇನ್ನೊಂದು ಮನ್ನಣೆ ಬೇಕಿಲ್ಲ ಎನಿಸುತ್ತದೆ. ನಾನು ಕ್ರೀಡಾಪಟುವಾಗಿದ್ದಾಗ ಬೇರೆ ರಾಜ್ಯಗಳಿಗೆ ಆಡಲು ದಿನಗಟ್ಟಲೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಈಗ ಸಬ್-ಜೂನಿಯರ್ ವಿಭಾಗದಲ್ಲಿ ಆಡುವ ಮಕ್ಕಳನ್ನೂ ವಿಮಾನದಲ್ಲಿ ಕಳಿಸುತ್ತೇವೆ. ನಮ್ಮ ರಾಜ್ಯದ, ದೇಶದ ಮಕ್ಕಳಿಗೆ ಗುಣಮಟ್ಟದ ಸೌಕರ್ಯಗಳು ಸಿಗಬೇಕು, ಅದನ್ನು ಸಾಧ್ಯವಾದಷ್ಟು ಒದಗಿಸುತ್ತೇವೆ ಎನ್ನುವ ಬಗ್ಗೆ ಖಂಡಿತವಾಗಿಯೂ ಖುಷಿ ಇದೆ.