ಸಾರಾಂಶ
ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಮುಖ ಪದಕ ಭರವಸೆ ಕ್ರೀಡೆಯಾಗಿರುವ ಹಾಕಿಯ ಸೆಮಿಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತ ಹಾಗೂ ಜರ್ಮನಿ ತಂಡಗಳು ಪರಸ್ಪರ ಸೆಣಸಾಡಲಿವೆ.
ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್‌ನ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿಯನ್ನು ಸೋಲಿಸಿ ಐತಿಹಾಸಿಕ ಪದಕ ಗೆದ್ದಿದ್ದ ಭಾರತ, ಈ ಬಾರಿ ಮತ್ತೆ ಜರ್ಮನಿಗೆ ಸೋಲುಣಿಸಿ ಇತಿಹಾಸ ಸೃಷ್ಟಿಸಲು ಕಾಯುತ್ತಿದೆ.
ಭಾರತ ಕೊನೆ ಬಾರಿ 1980ರಲ್ಲಿ ಫೈನಲ್‌ಗೇರಿ, ಚಿನ್ನ ಗೆದ್ದಿತ್ತು. ಬರೋಬ್ಬರಿ 44 ವರ್ಷಗಳ ಬಳಿಕ ಮತ್ತೆ ಫೈನಲ್ ಪ್ರವೇಶಿಸುವ ಕಾತರದಲ್ಲಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ, ಭಾನುವಾರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಶೂಟೌಟ್‌ನಲ್ಲಿ ಗೆದ್ದಿತ್ತು. ಅತ್ತ ಜರ್ಮನಿ ತಂಡ ಅರ್ಜೆಂಟೀನಾ ವಿರುದ್ಧ ಗೆದ್ದು ಸೆಮೀಸ್‌ಗೇರಿದೆ.
ಭಾರತ ಹಾಗೂ ಜರ್ಮನಿ ಕಳೆದ ಜೂನ್‌ನಲ್ಲಿ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ 2 ಬಾರಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, 2ನೇ ಮುಖಾಮುಖಿಯಲ್ಲಿ ಜರ್ಮನಿ ಗೆದ್ದಿತ್ತು. ಬಳಿಕ ಒಲಿಂಪಿಕ್ಸ್ ಸಿದ್ಧತೆಗಾಗಿ ಉಭಯ ತಂಡಗಳ ನಡುವೆ ನಡೆದ 6 ಅಭ್ಯಾಸ ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿತ್ತು.ಮಂಗಳವಾರ ಮತ್ತೊಂದು ಸೆಮಿಫೈನಲ್‌ನಲ್ಲಿ ನೆದರ್‌ಲೆಂಡ್ಸ್ ಹಾಗೂ ಸ್ಪೇನ್ ತಂಡಗಳು ಪರಸ್ಪರ ಸೆಣಸಾಡಲಿವೆ.