538 ಅಂತಾರಾಷ್ಟ್ರೀಯ ಪಂದ್ಯ ಆಡಿದ್ರೂ ‘ಅನ್‌ಕ್ಯಾಪ್ಡ್‌’ ಆಟಗಾರನಾಗಿ ಧೋನಿ ಚೆನ್ನೈಗೆ ರೀಟೈನ್‌?

| Published : Oct 31 2024, 12:50 AM IST

ಸಾರಾಂಶ

ಅನ್‌ಕ್ಯಾಪ್ಡ್‌ ಆಟಗಾರರಿಗೆ ನಿಗದಿಪಡಿಸಲಾಗಿರುವ ₹4 ಕೋಟಿ ನೀಡಿ ಮಾಜಿ ನಾಯಕ ಧೋನಿಯನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ನವದೆಹಲಿ: 538 ಅಂತಾರಾಷ್ಟ್ರೀಯ ಪಂದ್ಯವಾಡಿರುವ ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಈ ಬಾರಿ ಅನ್‌ಕ್ಯಾಪ್ಡ್‌ ಅಂದರೆ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ವಿಭಾಗದಲ್ಲಿ ಚೆನ್ನೈ ತಂಡಕ್ಕೆ ರೀಟೈನ್‌ ಆಗುವ ಸಾಧ್ಯತೆ ಹೆಚ್ಚು. ಬಿಸಿಸಿಐ ನಿಯಮದ ಪ್ರಕಾರ ಯಾವುದೇ ಆಟಗಾರ ಕಳೆದ 5 ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯವಾಡದಿದ್ದರೆ ಅವರನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅನ್‌ಕ್ಯಾಪ್ಡ್‌ ಆಟಗಾರರಿಗೆ ನಿಗದಿಪಡಿಸಲಾಗಿರುವ ₹4 ಕೋಟಿ ನೀಡಿ ಧೋನಿಯನ್ನು ಚೆನ್ನೈ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಉಳಿದಂತೆ ಋತುರಾಜ್‌ ಗಾಯಕ್ವಾಡ್‌, ರವೀಂದ್ರ ಜಡೇಜಾ, ಶಿವಂ ದುಬೆ ಹಾಗೂ ಪತಿರನ ಅವರನ್ನು ತಂಡ ರೀಟೈನ್‌ ಮಾಡಿಕೊಳ್ಳಲಿದೆ ಎಂದು ಗೊತ್ತಾಗಿದೆ.

ಕ್ಲಾಸೆನ್‌ಗೆ ₹23 ಕೋಟಿ ನೀಡುತ್ತಾ ಹೈದ್ರಾಬಾದ್?

ಸ್ಫೋಟಕ ಬ್ಯಾಟರ್‌ ಹೈನ್ರಿಚ್‌ ಕ್ಲಾಸೆನ್‌ಗೆ ಸನ್‌ರೈಸರ್ಸ್‌ ಹೈದರಾಬಾದ್‌ ಬರೋಬ್ಬರಿ ₹23 ಕೋಟಿ ನೀಡಿ ತಂಡದಲ್ಲೇ ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಉಳಿದಂತೆ ಅಭಿಷೇಕ್‌ ಶರ್ಮಾ, ಪ್ಯಾಟ್‌ ಕಮಿನ್ಸ್‌, ಟ್ರ್ಯಾವಿಸ್‌ ಹೆಡ್‌, ನಿತೀಶ್‌ ರೆಡ್ಡಿ ಕೂಡಾ ರೀಟೈನ್‌ ಆಗಲಿದ್ದಾರೆ ಎಂದು ವರದಿಯಾಗಿದೆ.

ಕೆಲ ಕ್ಯಾಪ್ಟನ್‌ಗಳೇ ಔಟ್‌ ಸಾಧ್ಯತೆ

ಕಳೆದ ಬಾರಿ ತಂಡ ಮುನ್ನಡೆಸಿದ್ದ ನಾಯಕರನ್ನೇ ಕೈ ಬಿಡಲು ಕೆಲ ಫ್ರಾಂಚೈಸಿಗಳು ನಿರ್ಧರಿಸಿದೆ ಎಂದು ಗೊತ್ತಾಗಿದೆ. ಲಖನೌ ನಾಯಕ ಕೆ.ಎಲ್‌.ರಾಹುಲ್‌, ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿ, ಡೆಲ್ಲಿ ನಾಯಕ ರಿಷಭ್‌ ಪಂತ್‌, ಕೆಕೆಆರ್‌ ನಾಯಕ ಶ್ರೇಯಸ್‌ರನ್ನು ತಂಡಗಳು ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರಶೀದ್‌ಗಿಂತ ಕಡಿಮೆ ವೇತನಕ್ಕೆ ಒಪ್ಪಿದ ಗಿಲ್‌?

ಗುಜರಾತ್‌ ಟೈಟಾನ್ಸ್‌ ತನ್ನ ನಾಯಕ ಶುಭ್‌ಮನ್‌ ಗಿಲ್‌ರನ್ನು ತಂಡದಲ್ಲೇ ಉಳಿಸಿಕೊಳ್ಳಲಿದೆ. ಆದರೆ ಅವರು 2ನೇ ಆಟಗಾರನಾಗಿ ತಂಡದಲ್ಲಿ ಉಳಿದುಕೊಳ್ಳುವ ಸಾಧ್ಯಯಿದ್ದು, ಒಂದನೇ ಆಟಗಾರನಾಗಿ ರಶೀದ್‌ ಖಾನ್‌ರನ್ನು ಫ್ರಾಂಚೈಸಿಯು ರೀಟೈನ್‌ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಹೀಗಾದರೆ ರಶೀದ್‌ ಖಾನ್‌ ₹18 ಕೋಟಿ, ಗಿಲ್‌ ₹14 ಕೋಟಿ ಪಡೆಯಲಿದ್ದಾರೆ.