ಸಾರಾಂಶ
ಭುವನೇಶ್ವರ: 78ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೂಟದಲ್ಲಿ ರಾಜ್ಯದ ಈಜುಪಟುಗಳು 16 ಚಿನ್ನ, 11 ಬೆಳ್ಳಿ, 14 ಕಂಚುಗಳೊಂದಿಗೆ ಒಟ್ಟು 41 ಪದಕ ಗೆದ್ದು ಮೊದಲ ಸ್ಥಾನ ಪಡೆದರು.
ಕೂಟದ ಕೊನೆಯ ದಿನವಾದ ಗುರುವಾರ, ಪುರುಷರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ರಾಜ್ಯದ ಶೋನ್ ಗಂಗೂಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿಹಿತಾ ಸ್ವರ್ಣಕ್ಕೆ ಮುತ್ತಿಟ್ಟರು.
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಉತ್ಕರ್ಷ್ ಪಾಟೀಲ್, ಆಕಾಶ್ ಮಣಿ ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರೆ, ಪುರುಷರ 100 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ತನಿಶ್ ಜಾರ್ಜ್ ರಜತ ಗೆದ್ದರು.
ಕೂಟದಲ್ಲಿ ಕರ್ನಾಟಕದ ಪುರುಷರ ತಂಡ 158 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ಮಹಿಳೆಯರು ಒಟ್ಟು 153 ಅಂಕ ಪಡೆದು ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಕರ್ನಾಟಕ ಒಟ್ಟು 311 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಆಯಿತು. ತಲಾ 2 ಕೂಟ ದಾಖಲೆಗಳನ್ನು ಬರೆದ ರಾಜ್ಯದ ಶೋನ್ ಗಂಗೂಲಿ, ಧಿನಿಧಿ ದೇಸಿಂಘು ಶ್ರೇಷ್ಠ ಈಜುಪಟುಗಳಾಗಿ ಹೊರಹೊಮ್ಮಿದರು.
8 ಚಿನ್ನ, 5 ಬೆಳ್ಳಿ, 3 ಕಂಚಿನೊಂದಿಗೆ 16 ಪದಕ ಗೆದ್ದ ತಮಿಳುನಾಡು, 5 ಚಿನ್ನ, ತಲಾ 6 ಬೆಳ್ಳಿ ಹಾಗೂ ಕಂಚಿನೊಂದಿಗೆ 17 ಪದಕ ಗೆದ್ದ ಮಹಾರಾಷ್ಟ್ರ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದವು.