ಮೊದಲ ಪ್ರಯತ್ನದಲ್ಲೇ 89.34 ಮೀ. ಥ್ರೋ: ಚಿನ್ನದ ಹುಡುಗ ಚೋಪ್ರಾ ಫೈನಲ್‌ಗೆ

| Published : Aug 07 2024, 01:06 AM IST

ಸಾರಾಂಶ

ಜಾವೆಲಿನ್‌ ಎಸೆತ. ಮೊದಲ ಪ್ರಯತ್ನದಲ್ಲೇ ಹಾಲಿ ಚಾಂಪಿಯನ್‌ ನೀರಜ್‌ ಪದಕ ಸುತ್ತಿಗೆ ಲಗ್ಗೆ. ಗುರುವಾರ ಫೈನಲ್‌ ಪಂದ್ಯ, ಚಿನ್ನದ ಭರವಸೆ. ಅರ್ಹತಾ ಸುತ್ತಲ್ಲೇ ಹೊರಬಿದ್ದ ಕಿಶೋರ್‌ ಜೆನಾ

ಪ್ಯಾರಿಸ್‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆಲ್ಲುವ ಮೂಲಕ ಭಾರತದ ಅಥ್ಲೆಟಿಕ್ಸ್‌ನ ದಿಕ್ಕನ್ನೆ ಬದಲಿಸಿದ್ದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಮತ್ತೊಮ್ಮೆ ಪ್ಯಾರಿಸ್‌ನಲ್ಲಿ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದಾರೆ. ಮಂಗಳವಾರ 26 ವರ್ಷದ ನೀರಜ್‌, ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ ಪ್ರವೇಶಿಸಿದ್ದಾರೆ.ಫೈನಲ್‌ಗೇರಬೇಕಿದ್ದರೆ, ಒಟ್ಟು 32 ಸ್ಪರ್ಧಿಗಳಿದ್ದ ಅರ್ಹತಾ ಸುತ್ತಿನಲ್ಲಿ 84 ಮೀ. ದೂರ ದಾಖಲಿಸಬೇಕಿತ್ತು ಅಥವಾ ಅಗ್ರ-12ರಲ್ಲಿ ಸ್ಥಾನ ಪಡೆಯಬೇಕಿತ್ತು. ನೀರಜ್‌ ತಮ್ಮ ಮೊದಲ ಪ್ರಯತ್ನದಲ್ಲೇ ಅರ್ಹತಾ ಮಾನದಂಡವನ್ನು ದಾಟಿದ ಹಿನ್ನೆಲೆಯಲ್ಲಿ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಅವರಿಗೆ ಇನ್ನೆರಡು ಎಸೆತಗಳ ಅವಕಾಶವಿದ್ದರೂ ಪ್ರಯತ್ನಿಸಲಿಲ್ಲ. ಪೈನಲ್‌ಗೇರಿರುವ 12 ಮಂದಿ ಪೈಕಿ ಮೊದಲ ನೀರಜ್‌ ಅಗ್ರಸ್ಥಾನ ಪಡೆದುಕೊಂಡರು.ಕಳೆದ ಮೇ ತಿಂಗಳಲ್ಲಿ ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ 88.36 ಮೀಟರ್‌ ದೂರಕ್ಕೆ ಎಸೆದಿದ್ದು ಅವರ ಈ ಋತುವಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನಲ್ಲಿ ತಮ್ಮ ಪ್ರದರ್ಶನವನ್ನು ಇನ್ನಷ್ಟು ಉತ್ತಮಗೊಳಿಸುವ ಮೂಲಕ ಕೋಟ್ಯಂತರ ಭಾರತೀಯರಲ್ಲಿ ಮತ್ತೆ ಚಿನ್ನದ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.ಇದೇ ವೇಳೆ, 2 ಬಾರಿ ವಿಶ್ವ ಚಾಂಪಿಯನ್‌, ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌ 88.63 ಮೀಟರ್‌ನೊಂದಿಗೆ ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಪಡೆದುಕೊಂಡರೆ, ಜರ್ಮನಿಯ ಜೂಲಿಯನ್‌ ವೆಬೆರ್‌ 87.76 ಮೀ. ದೂರ ದಾಖಲಿಸಿ 3ನೇ ಸ್ಥಾನ ಗಿಟ್ಟಿಸಿಕೊಂಡರು. ಹಾಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌, ಪಾಕಿಸ್ತಾನದ ಅರ್ಶದ್‌ ನದೀಮ್‌(86.59) ಕೂಡಾ ಫೈನಲ್ ಸುತ್ತು ಪ್ರವೇಶಿಸಿದ್ದಾರೆ. ಕಿಶೋರ್ ಜೆನಾ ಔಟ್‌ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್‌ ಜೆನಾ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ 80.73 ಮೀ. ದೂರ ದಾಖಲಿಸಿದರು. 2ನೇ ಪ್ರಯತ್ನ ಫೌಲ್‌ ಆದರೆ, 3ನೇ ಪ್ರಯತ್ನದಲ್ಲಿ 80.21 ಮೀ. ದೂರವನ್ನಷ್ಟೇ ದಾಖಲಿಸಿದರು. ಅವರು ‘ಎ’ ಗುಂಪಿನಲ್ಲಿ 9ನೇ, ಒಟ್ಟಾರೆ 32 ಸ್ಪರ್ಧಿಗಳ ಪೈಕಿ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ 87.54 ಮೀ. ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಜೆನಾ ನೇರವಾಗಿ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಪ್ಯಾರಿಸ್‌ನಲ್ಲಿ ನೀರಸ ಪ್ರದರ್ಶನ ನೀಡಿ ಹೊರಬಿದ್ದರು.

ಹೊಸ ಚರಿತ್ರೆ ಹೊಸ್ತಿಲಲ್ಲಿ ನೀರಜ್‌: ನಾಳೆ ಫೈನಲ್‌

ಪುರುಷರ ಜಾವೆಲಿನ್‌ ಎಸೆತದ ಫೈನಲ್‌ ಸ್ಪರ್ಧೆ ಗುರುವಾರ ನಡೆಯಲಿದ್ದು, ನೀರಜ್‌ ಸತತ 2ನೇ ಚಿನ್ನ ಗೆಲ್ಲುವ ಕಾತರದಲ್ಲಿದ್ದಾರೆ. ಟೋಕಿಯೋದಲ್ಲಿ ನೀರಜ್‌ 87.58 ಮೀ. ದೂರ ದಾಖಲಿಸಿ ಐತಿಹಾಸಿಕ ಬಂಗಾರ ಪಡೆದಿದ್ದರು. ಈ ಬಾರಿಯೂ ಚಿನ್ನ ಗೆದ್ದರೆ, ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಸತತ 2 ಬಾರಿ ಚಾಂಪಿಯನ್‌ ಆದ ವಿಶ್ವದ 5ನೇ ಅಥ್ಲೀಟ್‌ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, 2 ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 4ನೇ ಕ್ರೀಡಾಪಟು ಎನಿಸಿಕೊಳ್ಳಲಿದ್ದಾರೆ.ಪುರುಷರ ಜಾವೆಲಿನ್‌ ಎಸೆತದ ಫೈನಲ್‌ ಸ್ಪರ್ಧೆ ಗುರುವಾರ ನಡೆಯಲಿದ್ದು, ನೀರಜ್‌ ಸತತ 2ನೇ ಚಿನ್ನ ಗೆಲ್ಲುವ ಕಾತರದಲ್ಲಿದ್ದಾರೆ. ಟೋಕಿಯೋದಲ್ಲಿ ನೀರಜ್‌ 87.58 ಮೀ. ದೂರ ದಾಖಲಿಸಿ ಐತಿಹಾಸಿಕ ಬಂಗಾರ ಪಡೆದಿದ್ದರು. ಈ ಬಾರಿಯೂ ಚಿನ್ನ ಗೆದ್ದರೆ, ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಸತತ 2 ಬಾರಿ ಚಾಂಪಿಯನ್‌ ಆದ ವಿಶ್ವದ 5ನೇ ಅಥ್ಲೀಟ್‌ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, 2 ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ 4ನೇ ಕ್ರೀಡಾಪಟು ಎನಿಸಿಕೊಳ್ಳಲಿದ್ದಾರೆ.