ಸಾರಾಂಶ
ಲಾಹೋರ್: ಪ್ಯಾರಿಸ್ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಅರ್ಶದ್ ನದೀಂಗೆ ಪಾಕಿಸ್ತಾನದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಭಾನುವಾರ ತವರಿಗೆ ಆಗಮಿಸಿದ ನದೀಂಗೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.
ವಿಮಾನ ನಿಲ್ದಾಣದ ಬಳಿ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ನದೀಂಗೆ ಹಾರ ಹಾಕಲು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂಕು ನುಗ್ಗಲು ಉಂಟಾಯಿತು. ಹೀಗಾಗಿ, ಜನರನ್ನು ನಿಯಂತ್ರಿಸಲು ಪಾಕಿಸ್ತಾನಿ ಸೇನೆಯ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಇದೇ ವೇಳೆ ನದೀಂಗೆ ಪಾಕಿಸ್ತಾನ ಸರ್ಕಾರ, ಅವರ ತವರು ರಾಜ್ಯವಾದ ಪಂಜಾಬ್ ಸರ್ಕಾರ ಸೇರಿ ಒಟ್ಟು 15 ಕೋಟಿ ಪಾಕಿಸ್ತಾನಿ ರು. (ಭಾರತೀಯ ರು.ನಲ್ಲಿ ಅಂದಾಜು 4.52 ಕೋಟಿ) ಬಹುಮಾನ ಘೋಷಿಸಿವೆ.
ಭಾರತ ‘ಎ’ ವಿರುದ್ಧ ಟಿ20 ಸರಣಿಯನ್ನು 3-0ಯಲ್ಲಿ ಗೆದ್ದ ಆಸ್ಟ್ರೇಲಿಯಾ ‘ಎ’
ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ‘ಎ’ ಮಹಿಳಾ ತಂಡಕ್ಕೆ ನಿರಾಸೆ ಉಂಟಾಗಿದೆ. 3 ಪಂದ್ಯಗಳ ಸರಣಿಯನ್ನು ಭಾರತ ‘ಎ’ 0-3 ಅಂತರದಲ್ಲಿ ಸೋತಿದೆ. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲೆರಡು ಪಂದ್ಯಗಳನ್ನು ಕ್ರಮವಾಗಿ 5 ರನ್ ಹಾಗೂ 8 ವಿಕೆಟ್‌ಗಳಿಂದ ಗೆದ್ದಿತ್ತು. ಉಭಯ ತಂಡಗಳು 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದ್ದು, ಆ ಬಳಿಕ ಏಕೈಕ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸೆಣಸಲಿವೆ.