ಸಾರಾಂಶ
ಬೆಂಗಳೂರು: ನಗರದಲ್ಲಿ ನೀರಿನ ಅಭಾವ ತಲೆದೋರಿರುವುದರ ನಡುವೆಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ನೀರಿನ ಬಳಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಇಎ) ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಜಲಮಂಡಳಿ, ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್ ಜಾರಿಗೊಳಿಸಲಾಗಿದೆ.ಕಬ್ಬನ್ ಉದ್ಯಾನದಿಂದ ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಬಳಕೆ ಮಾಡಲು ಕೆಎಸ್‌ಸಿಎಗೆ ಜಲಮಂಡಳಿಯು ಅನುಮತಿ ನೀಡಿತ್ತು. ಅದರಂತೆ ಚಿನ್ನಸ್ವಾಮಿಯಲ್ಲಿ ಈ ಬಾರಿ ನಡೆದ 3 ಪಂದ್ಯಗಳಿಗೆ ತಲಾ 75,000 ಲೀಟರ್ ನೀರು ಬಳಕೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಕ್ರೀಡಾಂಗಣದಲ್ಲಿ ಇನ್ನೂ 4 ಪಂದ್ಯಗಳು ನಿಗದಿಯಾಗಿವೆ.ಈ ಬಗ್ಗೆ ಪೀಠದ ಮುಖ್ಯಸ್ಥ ನ್ಯಾ.ಪ್ರಕಾಶ್ ಶ್ರಿವಾಸ್ತವ ಹಾಗೂ ಸದಸ್ಯ ಡಾ.ಎ. ಸೆಂಥಿಲ್ ವೇಲ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಮೇ 2ರ ಮೊದಲು ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಇನ್ನು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ಸಿಇಒ ಶುಭೇಂದು ಘೋಷ್, ಕ್ರೀಡಾಂಗಣವು ಎನ್‌ಜಿಟಿ ಮಾನದಂಡಗಳಿಗೆ ಬದ್ಧವಾಗಿದೆ. ನಾವು ಟೂರ್ನಿಯ ಉಳಿದ ಪಂದ್ಯಗಳನ್ನೂ ಆಯೋಜಿಸುತ್ತೇವೆ’ ಎಂದಿದ್ದಾರೆ.