ಪ್ರಾಕ್ಟೀಸ್‌ ಆಯ್ಕೆಯಲ್ಲ, ಕಡ್ಡಾಯ: 2 ಸೋಲಿನ ಬಳಿಕ ಭಾರತ ಆಟಗಾರರಿಗೆ ಬಿಸಿಸಿಐ ಖಡಕ್‌ ಸೂಚನೆ

| Published : Oct 28 2024, 12:56 AM IST / Updated: Oct 28 2024, 04:10 AM IST

ಸಾರಾಂಶ

3ನೇ ಟೆಸ್ಟ್‌ಗೆ ಮುನ್ನ 2 ದಿನ ಅಭ್ಯಾಸಕ್ಕೆ ಸೂಚನೆ. ಕೊನೆ ಪಂದ್ಯಕ್ಕೂ ಮುನ್ನ ಕಡ್ಡಾಯವಾಗಿ ಅಭ್ಯಾಸ ನಡೆಸುವಂತೆ ಆಟಗಾರರಿಗೆ ಬಿಸಿಸಿಐ ಸ್ಪಷ್ಟ ನಿರ್ದೇಶನ ನೀಡಿದೆ.

ಮುಂಬೈ: ನ್ಯೂಜಿಲೆಂಡ್‌ ವಿರುದ್ಧ ಮೊದಲೆರಡು ಟೆಸ್ಟ್‌ ಪಂದ್ಯಗಳ ಸೋಲಿನ ಬಿಸಿ ಭಾರತೀಯ ಆಟಗಾರರಿಗೆ ತಟ್ಟಿದೆ. ಕೊನೆ ಪಂದ್ಯಕ್ಕೂ ಮುನ್ನ ಕಡ್ಡಾಯವಾಗಿ ಅಭ್ಯಾಸ ನಡೆಸುವಂತೆ ಆಟಗಾರರಿಗೆ ಬಿಸಿಸಿಐ ಸ್ಪಷ್ಟ ನಿರ್ದೇಶನ ನೀಡಿದೆ.

ಭಾರತೀಯ ಆಟಗಾರರಿಗೆ ಕೆಲ ಪಂದ್ಯಗಳಿಗೂ ಮುನ್ನ ಅಭ್ಯಾಸ ಶಿಬಿರದ ಆಯ್ಕೆ ಇರುತ್ತದೆ. ಅಂದರೆ ಯಾವುದೇ ಆಟಗಾರನಿಗೂ ಶಿಬಿರಕ್ಕೆ ಹಾಜರಾಗದೆ ಇರಬಹುದು. ಆದರೆ ನ.1ರಿಂದ ಆರಂಭಗೊಳ್ಳಲಿರುವ ಮುಂಬೈ ಟೆಸ್ಟ್‌ಗೂ ಮುನ್ನ ಆಟಗಾರರಿಗೆ ಅಭ್ಯಾಸ ಆಯ್ಕೆ ಅಲ್ಲ, ಕಡ್ಡಾಯ ಎಂದು ಬಿಸಿಸಿಐ ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

 ‘ಎಲ್ಲಾ ಆಟಗಾರರು ಅ.30 ಹಾಗೂ 31ರಂದು ಮುಂಬೈ ಕ್ರೀಡಾಂಗಣದಲ್ಲಿ ಅಭ್ಯಾಸ ಶಿಬಿರಕ್ಕೆ ಹಾಜರಾಗಬೇಕು. ಇದು ಕಡ್ಡಾಯ ಶಿಬಿರವಾಗಿದ್ದು, ಯಾರೂ ತಪ್ಪಿಸುವಂತಿಲ್ಲ’ ಎಂದು ತಂಡದ ಆಡಳಿತ ಆಟಗಾರರಿಗೆ ತಿಳಿಸಿದೆ ಎಂದು ತಿಳಿದುಬಂದಿದೆ. 

ಭಾರತ ಮೊದಲ ಪಂದ್ಯದಲ್ಲಿ ಕಿವೀಸ್‌ನ ವೇಗದ ಬೌಲರ್‌ಗಳ ಮುಂದೆ ಮಂಕಾಗಿದ್ದರೆ, 2ನೇ ಪಂದ್ಯದಲ್ಲಿ ತಾನೇ ತೋಡಿದ್ದ ಸ್ಪಿನ್ ಖೆಡ್ಡಾಕ್ಕೆ ಬಿದ್ದಿತ್ತು. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿದಂತೆ ಬಹುತೇಕ ಎಲ್ಲಾ ಬ್ಯಾಟರ್‌ಗಳು ಅಸ್ಥಿರ ಆಟವಾಡುತ್ತಿದ್ದು, ಕೊನೆ ಟೆಸ್ಟ್‌ನಲ್ಲಾದರೂ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಾದ ಒತ್ತಡದಲ್ಲಿದ್ದಾರೆ.