ರಾಜ್ಯದ ಫುಟ್ಬಾಲ್‌ ಮಾಂತ್ರಿಕರಿಗಿಲ್ಲ ಕಿಂಚಿತ್ ಬೆಲೆ!

| Published : Aug 21 2024, 12:42 AM IST

ಸಾರಾಂಶ

ಭಾರತದ ದಿಗ್ಗಜ ಫುಟ್ಬಾಲಿಗರ ಸಾಲಿನಲ್ಲಿದ್ದಾರೆ ಕರ್ನಾಟಕದ ಹಲವರು. ಒಲಿಂಪಿಕ್ಸ್‌ನಲ್ಲೂ ಕಾಲ್ಚಳಕ ತೋರಿಸಿದ್ದಾರೆ ರಾಜ್ಯದ 14 ಮಂದಿ. ರಾಜ್ಯ ಫುಟ್ಬಾಲ್‌ ಸ್ಟೇಡಿಯಂನಲ್ಲಿ ದಿಗ್ಗಜರ ಫೋಟೋ ಸಹ ಇಲ್ಲ. ತಾರಾ ವಿದೇಶಿ ಆಟಗಾರರ ಫೋಟೋಗಳಿಗಷ್ಟೇ ಕ್ರೀಡಾಂಗಣದಲ್ಲಿ ಜಾಗ.

ನಾಸಿರ್‌ ಸಜಿಪ

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲ್ಲ ಎಂಬ ಮಾತಿದೆ. ಅದು ಈಗ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ)ಗೆ ಸರಿಯಾಗಿ ಅನ್ವಯಿಸುತ್ತದೆ. ಕರ್ನಾಟಕ ಎಂದರೆ ಫುಟ್ಬಾಲ್‌ ಎಂಬಂತಿದ್ದ ಒಂದು ಕಾಲವಿತ್ತು. ಅದು ಈಗ ಇತಿಹಾಸ. ಆದರೆ ರಾಜ್ಯದಲ್ಲಿ ಸಾಲು ಸಾಲು ಫುಟ್ಬಾಲ್‌ ದಿಗ್ಗಜರಿದ್ದರು ಎಂಬುದೂ ಇಂದಿನ ಜನರಿಗೆ ಗೊತ್ತಿಲ್ಲ. ಗೊತ್ತು ಮಾಡಿಸುವ ಕೆಲಸವನ್ನು ಮಾಡಬೇಕಿರುವ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಅದರತ್ತ ಸ್ವಲ್ವವೂ ಗಮನ ಹರಿಸುತ್ತಿಲ್ಲ ಎನ್ನುವುದು ದುಃಖದ ಸಂಗತಿ.

ಹಾಕಿಯಲ್ಲಿ ಕರ್ನಾಟಕದ ಹೆಸರು ಒಂದು ಕಾಲದಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡಲಾಗಿತ್ತು ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಹಾಕಿ ಎಂದರೆ ಕರ್ನಾಟಕ ಎಂಬಂತಿದ್ದ ಕಾಲ ಅದು. ಆದರೆ ಫುಟ್ಬಾಲ್‌ನಲ್ಲೂ ಕರ್ನಾಟಕ ವಿಶ್ವ ಮಟ್ಟದಲ್ಲೇ ಖ್ಯಾತಿ ಗಳಿಸಿತ್ತು ಎಂಬುದು ತುಂಬಾ ಮಂದಿಗೆ ತಿಳಿದಿಲ್ಲ. ಆಗ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಶಿಪ್‌ ಸೇರಿ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಕನ್ನಡಿಗರದ್ದೇ ಕಾರುಬಾರು. ಆದರೆ ಅವರಿಟ್ಟ ಹೆಜ್ಜೆಗುರುತನ್ನು ಉಳಿಸಿಕೊಳ್ಳಲು ಕರ್ನಾಟಕ ಫುಟ್ಬಾಲ್‌ ಸಂಸ್ಥೆ ವಿಫಲವಾಗಿದೆ.

1948ರಿಂದ 1960ರ ವರೆಗೆ ಒಟ್ಟು 4 ಒಲಿಂಪಿಕ್ಸ್‌ಗಳಲ್ಲಿ ಕರ್ನಾಟಕದ 14 ಮಂದಿ ಭಾರತ ಫುಟ್ಬಾಲ್‌ ತಂಡವನ್ನು ಪ್ರತಿನಿಧಿಸಿದ್ದರು. 1960ರ ಬಳಿಕ ಭಾರತ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಒಲಿಂಪಿಕ್ಸ್‌ನಲ್ಲಿ ಭಾರತ ಆಡಿದಾಗಲೆಲ್ಲಾ ಕರ್ನಾಟಕದ ಫುಟ್ಬಾಲಿಗರೇ ತಂಡದ ಆಧಾರಸ್ತಂಭಗಳಾಗಿದ್ದರು.

ಆದರೆ, ಕೆಎಸ್‌ಎಫ್‌ಎ ನಮ್ಮ ಫುಟ್ಬಾಲ್‌ ಮಾಂತ್ರಿಕರಿಗಾಗಿ ಏನು ಮಾಡಿದೆ ಎಂದು ಪ್ರಶ್ನಿಸಿದರೆ ಉತ್ತರ ಶೂನ್ಯ. ನೀವು ಬೆಂಗಳೂರಿನಲ್ಲಿರುವ ಕೆಎಸ್‌ಎಫ್‌ಎ ಫುಟ್ಬಾಲ್ ಕ್ರೀಡಾಂಗಣಕ್ಕೆ ಒಮ್ಮೆ ಭೇಟಿ ನೀಡಿ. ಅಲ್ಲಿನ ಗೋಡೆಗಳಲ್ಲಿ ಡಿಯಾಗೊ ಮರಡೋನಾ, ಪೀಲೆ, ಲಿಯೋನೆಲ್‌ ಮೆಸ್ಸಿ, ಥಾಮಸ್‌ ಮುಲ್ಲರ್‌, ವೇಯ್ನ್‌ ರೂನಿ, ರೊನಾಲ್ಡಿನೋ ಫೋಟೋಗಳು ಕಾಣಸಿಗುತ್ತವೆ. ಇಂಥ ದಿಗ್ಗಜರ ಫೋಟೋ ಹಾಕುವುದರಲ್ಲಿ ತಪ್ಪಿಲ್ಲ. ಆದರೆ ಭಾರತೀಯ ಫುಟ್ಬಾಲ್‌ನ ದಂಥಕತೆಗಳೆನಿಸಿರುವ ನಮ್ಮ ರಾಜ್ಯದ ಆಟಗಾರರ ಫೋಟೋಗಳು ರಾಜ್ಯ ಕ್ರೀಡಾಂಗಣದಲ್ಲಿ ರಾರಾಜಿಸಬೇಕು ಎನ್ನುವ ಆಸೆಯನ್ನು ಕರ್ನಾಟಕದ ಫುಟ್ಬಾಲ್‌ ಅಭಿಮಾನಿಗಳು ಇಟ್ಟುಕೊಳ್ಳುವುದು ತಪ್ಪಲ್ಲ.

ಇದೇ ವೇಳೆ ಮತ್ತೊಂದು ವಿಷಯ ನಿಮಗೆ ಅಚ್ಚರಿ ಎನಿಸಬಹುದು, ಕೆಎಸ್‌ಎಫ್‌ಎ ಅಧ್ಯಕ್ಷರಾಗಿರುವ ಶಾಸಕ ಎನ್‌.ಎ.ಹ್ಯಾರಿಸ್‌ ಫುಟ್ಬಾಲ್‌ ಆಡುತ್ತಿರುವ ದೊಡ್ಡ ಫೋಟೋ ನಿಮಗೆ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ ಕಾಣಿಸುತ್ತದೆ.

ಫೋಟೋಗಳನ್ನು ಬಿಡಿ, ಇಂದಿನ ಪೀಳಿಗೆಯ ಆಟಗಾರರಿಗೆ ಕರ್ನಾಟಕದಿಂದ ಎಷ್ಟು ಮಂದಿ ಭಾರತ ತಂಡಕ್ಕೆ ಆಡಿದ್ದಾರೆ ಎನ್ನುವ ಸಣ್ಣ ಮಾಹಿತಿ ಫಲಕವೂ ಕ್ರೀಡಾಂಗಣದಲ್ಲಿಲ್ಲ. ಕೆಎಸ್‌ಎಫ್‌ಎ ಕಚೇರಿಯಲ್ಲಿ ಕೆಲ ಫೋಟೋಗಳನ್ನು ತೂಗು ಹಾಕಲಾಗಿದ್ದರೂ ಹೊರಗಿನವರಿಗೆ ನೋಡಲು ಸಾಧ್ಯವಿಲ್ಲ. ಯಾವುದಾದರೂ ಗೇಟ್‌, ಸ್ಟ್ಯಾಂಡ್‌ಗೆ ನಮ್ಮದೇ ಫುಟ್ಬಾಲ್‌ ದಿಗ್ಗಜರ ಹೆಸರಿಟ್ಟಿದ್ದಾರೆಯೇ? ಅದೂ ಇಲ್ಲ. ಇನ್ನು ಸ್ವಲ್ಪ ದಿನದಲ್ಲಿ ಗೇಟ್‌, ಸ್ಟ್ಯಾಂಡ್‌ಗಳು ಇರುತ್ತವೆಯೋ ಅಥವಾ ಬಿದ್ದು ಹೋಗುತ್ತವೆಯೋ ಗೊತ್ತಿಲ್ಲ. ಒಂದರ್ಥದಲ್ಲಿ ಕರ್ನಾಟಕ ಫುಟ್ಬಾಲ್‌ನ ಶ್ರೀಮಂತ ಇತಿಹಾಸವೇ ಈಗ ಕಾಲಗರ್ಭದಲ್ಲಿ ಹುದುಗಿಹೋದಂತಿದೆ.ಒಲಿಂಪಿಕ್ಸ್‌ ಗೋಲು ಬಾರಿಸಿದ6 ಜನರಲ್ಲಿ ಇಬ್ಬರು ಕನ್ನಡಿಗರುಭಾರತ ತಂಡ ಈ ವರೆಗೂ 4 ಒಲಿಂಪಿಕ್ಸ್‌ನಲ್ಲಿ ಆಡಿದೆ. ತಂಡದ 6 ಮಂದಿ ಒಟ್ಟು 10 ಗೋಲು ದಾಖಲಿಸಿದ್ದಾರೆ. ಈ 6 ಮಂದಿಯಲ್ಲಿ ಕರ್ನಾಟಕದ ಇಬ್ಬರು ಇದ್ದಾರೆ. 1952ರಲ್ಲಿ ಅಹ್ಮದ್‌ ಖಾನ್‌ ಯುಗೊಸ್ಲೇವಿಯಾ ವಿರುದ್ಧ ಗೋಲು ಬಾರಿಸಿದ್ದರೆ, 1956ರಲ್ಲಿ ಕೃಷ್ಣಸ್ವಾಮಿ ಆಸ್ಟ್ರೇಲಿಯಾ ವಿರುದ್ಧ ಗೋಲು ಹೊಡೆದಿದ್ದರು.ಹಲವು ಬಾರಿ ಮನವಿಕೊಟ್ಟರೂ ಕ್ಯಾರೇ ಇಲ್ಲರಾಜ್ಯದ ದಿಗ್ಗಜ ಫುಟ್ಬಾಲ್‌ ಆಟಗಾರರ ಹೆಸರು ಅಳಿಸಿ ಹೋಗದಿರಲು ಅವರ ನೆನಪಿಗಾಗಿ ಕನಿಷ್ಠ ಪೋಟೋಗಳನ್ನಾದರೂ ಹಾಕಬೇಕು ಎಂದು ಫುಟ್ಬಾಲ್‌ ಪ್ರೇಮಿಗಳು ಈಗಾಗಲೇ ಕೆಎಸ್‌ಎಫ್‌ಎಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಯಾವುದೇ ಮನವಿಗೂ ರಾಜ್ಯ ಫುಟ್ಬಾಲ್‌ ಸಂಸ್ಥೆ ಸ್ಪಂದಿಸಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಮಾಜಿ ಫುಟ್ಬಾಲಿಗರೊಬ್ಬರು ‘ಕನ್ನಡಪ್ರಭ’ದೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ.-

ಒಲಿಂಪಿಕ್ಸ್‌ನಲ್ಲಿ ಆಡಿದ ಕನ್ನಡಿಗರುಆಟಗಾರರುವರ್ಷ

ಕೆ.ವಿ.ವರದರಾಜ್‌1948, 1952

ಎಸ್‌.ಎ.ಬಶೀರ್1948

ಬಿ.ಎನ್‌.ವಜ್ರವೇಲು1948

ಅಹ್ಮದ್‌ ಖಾನ್‌1948, 1952

ಎಸ್‌.ರಾಮನ್‌1948

ಧನರಾಜ್‌1948

ಬೆರ್ಲಾಂಡ್‌ ಆ್ಯಂಟನಿ1952

ಷನ್ಮುಗಂ1952

ಜೋಸೆಫ್‌ ಆ್ಯಂಟನಿ1952

ಎಂ.ಎ.ಸತ್ತಾರ್‌1952

ಪಿ.ವೆಂಕಟೇಶ್1952

ಎಂ.ಕೆಂಪಯ್ಯ1956, 1960

ಕೃಷ್ಣಸ್ವಾಮಿ1956

ಕನ್ನಯ್ಯನ್‌1956, 1960-

-