ಸಾರಾಂಶ
ತಮ್ಮ ಸೋದರ ಸಂಬಂಧಿ ಬಿಜೆಪಿಯ ಬಬಿತಾ ಫೋಗಟ್ ವಿರುದ್ಧ ಕಣಕ್ಕೆ?. ಯಾವ ಪಾರ್ಟಿಯಿಂದ ಸ್ಪರ್ಧೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ವಿನೇಶ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕ ದೀಪೇಂದ್ರ ಹೂಡಾ.
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ‘100 ಗ್ರಾಂ’ಗಳಿಂದ ಪದಕ ವಂಚಿತರಾದ ಕುಸ್ತಿಪಟು ವಿನೇಶ್ ಫೋಗಟ್ ಮುಂಬರುವ
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ವಿನೇಶ್ ತಮ್ಮ ಸೋದರ ಸಂಬಂಧಿ, ಮಾಜಿ ಕುಸ್ತಿಪಟು ಬಿಜೆಪಿಯ ಬಬಿತಾ ಫೋಗಟ್ ವಿರುದ್ಧ ಸ್ಪರ್ಧೆ ಮಾಡಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. 2019ರಲ್ಲಿ ಬಬಿತಾ, ದಾದ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ವಿನೇಶ್ ತಾವು ಸಕ್ರಿಯ ರಾಜಕಾರಣಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರಾದರೂ ಅವರ ಮನವೊಲಿಸಲು ಕೆಲ ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಪ್ಯಾರಿಸ್‌ನಿಂದ ತವರಿಗೆ ಆಗಮಿಸಿದ ವಿನೇಶ್‌ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ದೊರೆತಿತ್ತು. ಬಳಿಕ ತಮ್ಮ ತವರೂರು ಹರ್ಯಾಣದ ಬಲಾಲಿವರೆಗೂ ವಿನೇಶ್ ಕಾರ್ ರ್‍ಯಾಲಿ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕ ದೀಪೇಂದ್ರ ಹೂಡಾ ಸಹ ವಿನೇಶ್ ಜೊತೆಗಿದ್ದರು. ಬಜರಂಗ್ vs ಯೋಗೇಶ್ವರ್?ಇದೇ ವೇಳೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಹಾಗೂ ಯೋಗೇಶ್ವರ್ ದತ್, ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2019ರ ಚುನಾವಣೆಯಲ್ಲಿ ಬರೋದಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಯೋಗೇಶ್ವರ್ ಸೋಲುಂಡಿದ್ದರು.