ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್‌ನ ಪುರುಷರ 100 ಮೀ. ಓಟದ ಫೈನಲ್ ನಾಟಕೀಯ ರೀತಿಯಲ್ಲಿ ಮುಕ್ತಾಯಗೊಂಡಿದೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ನೊಹಾ ಲೈಲ್ಸ್ ಕೇವಲ 0.005 ಸೆಕೆಂಡ್ ಅಂತರದಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಅವರು 9.784 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಜಮೈಕಾದ ಕಿಶಾನೆ ಥಾಮ್ಸನ್(9.789 ಸೆಕೆಂಡ್) ಬೆಳ್ಳಿ, ಅಮೆರಿಕದ ಫ್ರೆಡ್ ಕರ್ಲಿ(9.81 ಸೆಕೆಂಡ್) ಕಂಚು ತಮ್ಮದಾಗಿಸಿಕೊಂಡರು. ಎಲ್ಲಾ ಅಥ್ಲೀಟ್‌ಗಳಿಂದ ನಿಕಟ ಸ್ಪರ್ಧೆ ಕಂಡುಬಂದ ಕಾರಣ ಆಯೋಜಕರು ಫೋಟೋ ಫಿನಿಶ್‌ನಲ್ಲಿ ವಿಜೇತರನ್ನು ನಿರ್ಧರಿಸಿದರು.
ಏನಿದು ಫೋಟೋ ಫಿನಿಶ್?
ಎಲ್ಲಾ ಸ್ಪರ್ಧಿಗಳು ಮಿಲಿ ಸೆಂಟಿ ಮೀಟರ್ ಅಂತರದಲ್ಲಿ ಗುರಿ ತಲುಪಿದ್ದರು. ಹೀಗಾಗಿ ಫಲಿತಾಂಶ ನಿರ್ಧರಿಸುವುದು ಆಯೋಜಕರಿಗೆ ಸವಾಲಾಗಿ ಪರಿಣಮಿಸಿತು. ಕೊನೆಗೆ ಸ್ಪರ್ಧಿಗಳು ಗುರಿ ತಲುಪಿದಾಗ ತೆಗೆದಿದ್ದ ಫೋಟೋಗಳನ್ನು ವಿವಿಧ ತಂತಜ್ಞಾನಗಳ ಮೂಲಕ ಪರಿಶೀಲಿಸಿ ವಿಜೇತರನ್ನು ಘೋಷಿಸಲಾಯಿತು.
ಟೇಬಲ್ ಟೆನಿಸ್: ಭಾರತ ವನಿತಾ ತಂಡ ಕ್ವಾರ್ಟರ್‌ಗೆ
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ತಂಡ ವಿಭಾಗದ ಟೇಬಲ್ ಟೆನಿಸ್‌ನಲ್ಲಿ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸೋಮವಾರ ರೊಮಾನಿಯಾ ವಿರುದ್ಧದ ಪ್ರಿ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಭಾರತಕ್ಕೆ 3-2 ಗೇಮ್‌ಗಳಲ್ಲಿ ರೋಚಕ ಗೆಲುವು ಲಭಿಸಿತು.
ಶ್ರೀಜಾ-ಕರ್ನಾಟಕದ ಅರ್ಚನಾ ಕಾಮತ್ ಜೋಡಿ ಮೊದಲ ಡಬಲ್ಸ್‌ನಲ್ಲಿ ಗೆದ್ದರೆ, ಮನಿಕಾ ಬಾತ್ರಾ ಸಿಂಗಲ್ಸ್‌ನಲ್ಲಿ ಜಯಗಳಿಸಿದರು. ಆದರೆ ನಂತರದ 2 ಸಿಂಗಲ್ಸ್ ಪಂದ್ಯಗಳಲ್ಲಿ ಕ್ರಮವಾಗಿ ಶ್ರೀಜಾ ಹಾಗೂ ಅರ್ಚನಾ ಸೋಲನುಭವಿಸಿದರು. ನಿರ್ಣಾಯಕ ಕೊನೆ ಸಿಂಗಲ್ಸ್ ಪಂದ್ಯದಲ್ಲಿ ಮನಿಕಾ ಗೆದ್ದು ಭಾರತವನ್ನು ಅಂತಿಮ 8ರ ಘಟ್ಟಕ್ಕೇರಿಸಿದರು. ಮಂಗಳವಾರ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.