ಫೈನಲ್‌ಗಾಗಿ ಕಿವೀಸ್‌ vs ದ.ಆಫ್ರಿಕಾ ಹೋರಾಟ: ಗೆದ್ದ ತಂಡಕ್ಕೆ ಭಾರತ ವಿರುದ್ಧ ಟ್ರೋಫಿ ಫೈಟ್‌

| Published : Mar 05 2025, 12:34 AM IST

ಸಾರಾಂಶ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ. ಇಂದು ಲಾಹೋರ್‌ನಲ್ಲಿ 2ನೇ ಸೆಮಿಫೈನಲ್‌ ಪಂದ್ಯ. ದ.ಆಫ್ರಿಕಾ ತನ್ನ ಚೋಕರ್ಸ್‌ ಹಣೆಪಟ್ಟಿ ಕಳಚಿ ಟೂರ್ನಿಯಲ್ಲಿ 2ನೇ ಫೈನಲ್‌ಗೇರಲು ಕಾಯುತ್ತಿದೆ.

ಲಾಹೋರ್: 9ನೇ ಆವೃತ್ತಿ ಚಾಂಪಿಯನ್ಸ್‌ ಟ್ರೋಫಿಯ 2ನೇ ಸೆಮಿಫೈನಲ್‌ ಪಂದ್ಯ ಬುಧವಾರ ನಡೆಯಲಿದೆ. ಫೈನಲ್‌ ಟಿಕೆಟ್‌ಗಾಗಿ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಪರಸ್ಪರ ಸೆಣಸಾಡಲಿದ್ದು, ಪಂದ್ಯಕ್ಕೆ ಲಾಹೋರ್‌ ಆತಿಥ್ಯ ವಹಿಸಲಿದೆ.

ದ.ಆಫ್ರಿಕಾ ಹಾಗೂ ಕಿವೀಸ್‌ ತಂಡಗಳು ತಲಾ ಒಂದು ಬಾರಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದೆ. 1998ರ ಚೊಚ್ಚಲ ಆವೃತ್ತಿಯಲ್ಲಿ ದ.ಆಫ್ರಿಕಾ, 2000ರಲ್ಲಿ ನ್ಯೂಜಿಲೆಂಡ್‌ ಚಾಂಪಿಯನ್‌ ಆಗಿದ್ದವು. ಆ ಬಳಿಕ ನ್ಯೂಜಿಲೆಂಡ್‌ ಮಾತ್ರ ಫೈನಲ್‌ವರೆಗೆ ತಲುಪಿದೆ. ತಂಡ 2009ರಲ್ಲಿ ರನ್ನರ್‌-ಅಪ್‌ ಆಗಿತ್ತು. ದ.ಆಫ್ರಿಕಾ ತನ್ನ ಚೋಕರ್ಸ್‌ ಹಣೆಪಟ್ಟಿ ಕಳಚಿ ಟೂರ್ನಿಯಲ್ಲಿ 2ನೇ ಫೈನಲ್‌ಗೇರಲು ಕಾಯುತ್ತಿದೆ. ತಂಡ ಒಟ್ಟು 4 ಬಾರಿ ಸೆಮಿಫೈನಲ್‌ನಲ್ಲಿ ಸೋತಿದ್ದು, 2024ರ ಟಿ20 ವಿಶ್ವಕಪ್‌ ಬಳಿಕ ಮತ್ತೊಂದು ಪ್ರಶಸ್ತಿ ಸುತ್ತಿನ ಕದನದ ಕಾತರದಲ್ಲಿದೆ.ಇನ್ನು, ನ್ಯೂಜಿಲೆಂಡ್‌ ತಂಡ 2015, 2019ರ ಏಕದಿನ ವಿಶ್ವಕಪ್‌, 2021ರ ಟಿ20 ವಿಶ್ವಕಪ್ ಫೈನಲ್‌ ಸೋತಿದ್ದು, ಐಸಿಸಿ ಸೀಮಿತ ಓವರ್‌ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿಕೊಳ್ಳಲು ದೀರ್ಘ ಸಮಯದಿಂದ ಕಾಯುತ್ತಿದೆ.ಈ ಬಾರಿ ಟೂರ್ನಿಯಲ್ಲಿ ತೆಂಬಾ ಬವುಮಾ ನಾಯಕತ್ವದ ದ.ಆಫ್ರಿಕಾ ಆಡಿರುವ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ತಂಡ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಿದೆ. ಮಿಚೆಲ್‌ ಸ್ಯಾಂಟ್ನರ್‌ ನೇತೃತ್ವದ ನ್ಯೂಜಿಲೆಂಡ್‌ ‘ಎ’ ಗುಂಪಿನಲ್ಲಿ ಆಡಿರುವ 3ರ ಪೈಕಿ 2ರಲ್ಲಿ ಗೆದ್ದಿದ್ದು, 2ನೇ ಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿದೆ. ಇತ್ತೀಚೆಗಷ್ಟೇ ತ್ರಿಕೋನ ಸರಣಿಯಲ್ಲಿ ಲಾಹೋರ್‌ನಲ್ಲೇ ದ.ಆಫ್ರಿಕಾವನ್ನು ಸೋಲಿಸಿದ್ದ ನ್ಯೂಜಿಲೆಂಡ್‌, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

ಒಟ್ಟು ಮುಖಾಮುಖಿ: 73ದ.ಆಫ್ರಿಕಾ: 42

ನ್ಯೂಜಿಲೆಂಡ್‌: 26ಫಲಿತಾಂಶವಿಲ್ಲ: 05

ಸಂಭವನೀಯ ಆಟಗಾರರುದ.ಆಫ್ರಿಕಾ: ರಿಕೆಲ್ಟನ್‌, ಬವುಮಾ(ನಾಯಕ), ಡಸೆನ್‌, ಮಾರ್ಕ್‌ರಮ್‌, ಕ್ಲಾಸೆನ್‌, ಮಿಲ್ಲರ್‌, ಯಾನ್ಸನ್‌, ಮುಲ್ಡರ್‌, ಕೇಶವ್‌ ಮಹಾರಾಜ್‌, ರಬಾಡ, ಎನ್‌ಗಿಡಿ.ನ್ಯೂಜಿಲೆಂಡ್‌: ಯಂಗ್‌, ರಚಿನ್‌, ವಿಲಿಯಮ್ಸನ್‌, ಡ್ಯಾರಿಲ್‌, ಲೇಥಮ್‌, ಫಿಲಿಪ್ಸ್‌, ಬ್ರೇಸ್‌ವೆಲ್‌, ಸ್ಯಾಂಟ್ನರ್‌(ನಾಯಕ), ಮ್ಯಾಟ್‌ ಹೆನ್ರಿ, ಜೇಮಿಸನ್‌, ಒರೌರ್ಕೆ.

ಪಂದ್ಯ: ಮಧ್ಯಾಹ್ನ 2.30ಕ್ಕೆ

ಪಿಚ್‌ ರಿಪೋರ್ಟ್‌

ಲಾಹೋರ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಇಲ್ಲಿ ನಡೆದ ಟೂರ್ನಿಯ ಆರಂಭಿಕ ಎರಡೂ ಪಂದ್ಯಗಳ ಎಲ್ಲಾ 4 ಇನ್ನಿಂಗ್ಸ್‌ಗಳಲ್ಲೂ 300+ ರನ್‌ ದಾಖಲಾಗಿದ್ದವು. ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.