ಸಾರಾಂಶ
ಬ್ರಿಸ್ಬೇನ್: 2021ರ ಗಾಬಾ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವು ಯಾರಿಗೆ ತಾನೆ ನೆನಪಿಲ್ಲ?. ಬರೋಬ್ಬರಿ 33 ವರ್ಷಗಳ ಕಾಲ ಬ್ರಿಸ್ಬೇನ್‌ನ ಗಾಬಾದಲ್ಲಿ ಸೋಲಿಲ್ಲದ ಸರದಾರನೆಂಬಂತೆ ಪರಾಕ್ರಮ ಮೆರೆದಿದ್ದ ಆಸ್ಟ್ರೇಲಿಯಾವನ್ನು ಬಗ್ಗು ಬಡಿದಿದ್ದ ಭಾರತದ ಯುವ ಪಡೆ, ಗಾಬಾ ಕೋಟೆಯನ್ನು ಬೇಧಿಸುವುದರ ಜೊತೆಗೆ ಆಸೀಸ್‌ನ ಆತ್ಮವಿಶ್ವಾಸಕ್ಕೇ ಬಲುದೊಡ್ಡ ಕೊಡಲಿಯೇಟು ನೀಡಿತ್ತು.
ಅದೇ ಕ್ರೀಡಾಂಗಣದಲ್ಲೀಗ ಉಭಯ ತಂಡಗಳು ಪರಸ್ಪರ ಸೆಣಸಾಟಕ್ಕೆ ಸಜ್ಜಾಗಿವೆ.2 ವಿಶ್ವಶ್ರೇಷ್ಠ ತಂಡಗಳಾಗಿರುವ ಭಾರತ ಹಾಗೂ ಆಸ್ಟ್ರೇಲಿಯಾ, ತಮ್ಮ ಸಾಮರ್ಥ್ಯವೇನು ಎಂಬುದನ್ನು ಈ ಬಾರಿ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪ್ರದರ್ಶಿಸಿವೆ. ಪರ್ತ್‌ನಲ್ಲಿ ಭಾರತ 295 ರನ್‌ಗಳಿಂದ ಗೆದ್ದಿದ್ದರೆ, ಅಡಿಲೇಡ್‌ನಲ್ಲಿ ಆಸೀಸ್ 10 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತ್ತು. ಹೀಗಾಗಿ ಬ್ರಿಸ್ಬೇನ್‌ನಲ್ಲಿ ಸರಣಿ ಮುನ್ನಡೆಗಾಗಿ 2 ತಂಡಗಳ ನಡುವೆ ರಣರೋಚಕ ಪೈಪೋಟಿ ಏರ್ಪಡುವುದು ಖಚಿತ. ಭಾರತ 3 ವರ್ಷ ಬಳಿಕ ಮತ್ತೊಮ್ಮೆ ಗಾಬಾ ಕೋಟೆಯನ್ನು ಆಕ್ರಮಿಸಲು ಕಾಯುತ್ತಿದ್ದರೆ, 2021ರಲ್ಲಿ ಎದುರಾಗಿದ್ದ ಸೋಲಿನ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಆಸೀಸ್ ಕಾತರದಲ್ಲಿದೆ.
ಕೈ ಹಿಡಿಯುವರೇ ಸ್ಟಾರ್‌ಗಳು?: ಭಾರತಕ್ಕೆ ಈ ಸರಣಿಯಲ್ಲಿ ಹೆಚ್ಚಿನ ತಲೆನೋವು ತಂದಿದ್ದು ಸ್ಟಾರ್‌ಗಳ ವೈಫಲ್ಯ. ಪರ್ತ್‌ನಲ್ಲಿ ಶತಕ ಸಿಡಿಸಿದ ಹೊರತಾಗಿಯೂ ವಿರಾಟ್ ಕೊಹ್ಲಿ ಎಂದಿನ ಲಯದಲ್ಲಿಲ್ಲ. ನಾಯಕ ರೋಹಿತ್ ಶರ್ಮಾ ಆಟ ಮರೆತಂತೆ ಬ್ಯಾಟ್ ಬೀಸುತ್ತಿದ್ದಾರೆ. ಇವರಿಬ್ಬರೂ ಅಬ್ಬರಿಸಿದರಷ್ಟೇ ಭಾರತಕ್ಕೆ ಸರಣಿ ಮುನ್ನಡೆ ಸಿಗಬಹುದು. 2024-25ರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಕೇವಲ 6.88, ಕೊಹ್ಲಿ 10 ಸರಾಸರಿ ಹೊಂದಿದ್ದಾರೆ.
ರೋಹಿತ್ ಮತ್ತೆ ಆರಂಭಿಕ?: ರೋಹಿತ್ ಅನುಪಸ್ಥಿತಿಯಲ್ಲಿ ಪರ್ತ್ ಟೆಸ್ಟ್‌ನಲ್ಲಿ ಕೆ.ಎಲ್.ರಾಹುಲ್ ಆರಂಭಿಕನಾಗಿ ಆಡಿದ್ದರು. ಅಡಿಲೇಡ್ ಟೆಸ್ಟ್‌ಗೆ ರೋಹಿತ್ ಮರಳಿದ್ದರೂ, ರಾಹುಲ್ ಇನ್ನಿಂಗ್ಸ್ ಆರಂಭಿಸಿ ರೋಹಿತ್ 6ನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ 3ನೇ ಟೆಸ್ಟ್‌ಗೆ ರೋಹಿತ್ ತನ್ನ ಎಂದಿನ ಆರಂಭಿಕ ಸ್ಥಾನಕ್ಕೆ ಮರಳಬಹುದು. ಹೀಗಾದರೆ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ.
ಇನ್ನು, ರಾಹುಲ್, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ಹಾಗೂ ರಿಷಭ್ ಪಂತ್ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಕೈಸುಟ್ಟುಕೊಳ್ಳದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಇದೆ. ನಿತೀಶ್ ರೆಡ್ಡಿ ಮತ್ತೆ ಆಸೀಸ್ ಬೌಲರ್‌ಗಳ ಚಳಿ ಬಿಡಿಸಲು ಕಾಯುತ್ತಿದ್ದಾರೆ.
ಆಯ್ಕೆ ಗೊಂದಲ: ಸ್ಪಿನ್ನರ್ ಸ್ಥಾನಕ್ಕೆ ಆರಂಭಿಕ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್, 2ನೇ ಪಂದ್ಯಕ್ಕೆ ಆರ್.ಅಶ್ವಿನ್ ಆಯ್ಕೆಯಾಗಿದ್ದರು. ಇಬ್ಬರಿಂದಲೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅಶ್ವಿನ್ ಅಥವಾ ಸುಂದರ್‌ಗೆ ಅವಕಾಶ ನೀಡುವುದೋ ಅಥವಾ, ರವೀಂದ್ರ ಜಡೇಜಾರನ್ನು ಆಡಿಸುವುದೋ ಎಂಬ ಪ್ರಶ್ನೆ ತಂಡದಲ್ಲಿದೆ. ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್ ಜೊತೆ 3ನೇ ವೇಗಿಯಾಗಿ ಹರ್ಷಿತ್ ರಾಣಾ ಬದಲು ಆಕಾಶ್‌ದೀಪ್ ಸಿಂಗ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಬೋಲಂಡ್ ಔಟ್, ಜೋಶ್ ಇನ್: ಆಸೀಸ್ ಈ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕ ಪಂದ್ಯದ ವೇಳೆ ಉಂಟಾದ ಗಾಯದಿಂದಾಗಿ 2ನೇ ಪಂದ್ಯದಲ್ಲಿ ಜೋಶ್ ಹೇಜಲ್‌ವುಡ್ ಆಡಿರಲಿಲ್ಲ. ಬದಲಾಗಿ ಸ್ಕಾಟ್ ಬೋಲಂಡ್ ಕಣಕ್ಕಿಳಿದಿದ್ದರು. 3ನೇ ಪಂದ್ಯಕ್ಕೆ ಹೇಜಲ್‌ವುಡ್ ಮರಳಿದ್ದು, ಬೋಲಂಡ್ ಜಾಗ ಬಿಟ್ಟುಕೊಟ್ಟಿದ್ದಾರೆ. ಉಳಿದಂತೆ ತಂಡದ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಈಗಾಗಲೇ ಆಡುವ 11ರ ಬಳವನ್ನು ಪ್ರಕಟಿಸಲಾಗಿದೆ.
ಆಟಗಾರರ ಪಟ್ಟಿ
ಭಾರತ: (ಸಂಭವನೀಯ) ಯಶಸ್ವಿ ಜೈಸ್ವಾಲ್, ರೋಹಿತ್(ನಾಯಕ), ಕೆ.ಎಲ್.ರಾಹುಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ವಾಷಿಂಗ್ಟನ್/ಅಶ್ವಿನ್, ನಿತೀಶ್ ರೆಡ್ಡಿ, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್, ಆಕಾಶ್‌ದೀಪ್.
ಆಸ್ಟ್ರೇಲಿಯಾ: (ಆಡುವ 11) ಉಸ್ಮಾನ್ ಖವಾಜ, ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಹೇಜಲ್‌ವುಡ್.ಪಂದ್ಯ ಆರಂಭ: ಬೆಳಗ್ಗೆ 5.50ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್: ಕ್ಯುರೇಟರ್ ಪ್ರಕಾರ ಗಾಬಾ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ವೇಗ ಹಾಗೂ ಬೌನ್ಸರ್‌ಗಳು ಕಂಡುಬರುವ ಸಾಧ್ಯತೆ ಹೆಚ್ಚು. ಬ್ಯಾಟರ್‌ಗಳು ರನ್ ಗಳಿಸಲು ಕಷ್ಟಪಡಬೇಕಾಗಬಹುದು. ಟಾಸ್ ಮತ್ತೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು
ಮಳೆ ಅಡ್ಡಿ ಸಾಧ್ಯತೆ
ಪಂದ್ಯದ ಬಹುತೇಕ ಎಲ್ಲಾ ದಿನವೂ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಶನಿವಾರ ಶೇ.88, ಭಾನುವಾರ ಶೇ.58 ಹಾಗೂ ಸೋಮವಾರ ಶೇ.60ರಷ್ಟು ಮಳೆ ಸಾಧ್ಯತೆಯಿದೆ. ಕೊನೆ ದಿನ ಮಾತ್ರ ಮಳೆ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ.
42 ಗೆಲುವು: ಆಸ್ಟ್ರೇಲಿಯಾ ಬ್ರಿಸ್ಬೇನ್‌ನಲ್ಲಿ 66 ಟೆಸ್ಟ್ ಪಂದ್ಯಗಳನ್ನಾಡಿದ್ದು, 42ರಲ್ಲಿ ಗೆದ್ದಿದೆ. 7 ಪಂದ್ಯಗಳಲ್ಲಿ ತಂಡ ಸೋತಿದ್ದರೆ, ಉಳಿದ ಪಂದ್ಯಗಳು ಡ್ರಾಗೊಂಡಿವೆ.
05 ಸೋಲು: ಭಾರತ ತಂಡ ಬ್ರಿಸ್ಬೇನ್‌ನಲ್ಲಿ 7 ಟೆಸ್ಟ್ ಆಡಿದ್ದು, ಕೇವಲ 1 ಪಂದ್ಯ ಗೆದ್ದಿದೆ. 5 ಪಂದ್ಯಗಳಲ್ಲಿ ತಂಡ ಸೋತಿದ್ದರೆ, ಮತ್ತೊಂದು ಪಂದ್ಯ ಡ್ರಾ ಆಗಿತ್ತು.
02 ಸೋಲು: ಆಸ್ಟ್ರೇಲಿಯಾ ಗಾಬಾದಲ್ಲಿ ಆಡಿರುವ ಕೊನೆ 4 ಪಂದ್ಯಗಳ ಪೈಕಿ 2ರಲ್ಲಿ ಸೋತಿದೆ. 2021ರಲ್ಲಿ ಭಾರತ ವಿರುದ್ಧ, ಈ ವರ್ಷ ಜನವರಿಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಪರಾಭವಗೊಂಡಿತ್ತು.