ಸಾರಾಂಶ
ಅಫ್ಘಾನಿಸ್ತಾನ-ಬಾಂಗ್ಲಾದೇಶ ಪಂದ್ಯದಲ್ಲಿ ಹೈಡ್ರಾಮಾ!. ಕೋಚ್ ಸೂಚನೆ ಕೊಡುತ್ತಿದ್ದಂತೆ ನೆಲಕ್ಕೆ ಬಿದ್ದು ನಾಟಕವಾಡಿದ ಆಫ್ಘನ್‌ನ ಗುಲ್ಬ್‌ದಿನ್ ನೈಬ್. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್.
ಕಿಂಗ್ಸ್‌ಟೌನ್: ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಸೂಪರ್-8 ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿದ್ದಾಗ, ಅಫ್ಘಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್, ಬಾಂಗ್ಲಾಗೆ ಡಕ್ವರ್ತ್ ಲೂಯಿಸ್ ನಿಮಯದ ಲಾಭ ಸಿಗಬಾರದು ಎನ್ನುವ ಕಾರಣಕ್ಕೆ ಆಟವನ್ನು ವಿಳಂಬಗೊಳಿಸುವಂತೆ ಸೂಚಿಸಿದಾಗ, ಆಲ್ರೌಂಡರ್ ಗುಲ್ಬದಿನ್ ನೈಬ್ ಗಾಯಗೊಂಡವರಂತೆ ನಾಟಕ ಮಾಡಿದ ಪ್ರಸಂಗ ಮಂಗಳವಾರ ನಡೆಯಿತು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ನೈಬ್‌ರನ್ನು ಟೀಕಿಸಿದ್ದಾರೆ.
ಆಗಿದ್ದೇನು? ಇನ್ನಿಂಗ್ಸ್‌ನ 12ನೇ ಓವರಲ್ಲಿ ಬಾಂಗ್ಲಾ ಡಕ್ವರ್ತ್ ನಿಯಮದ ಪ್ರಕಾರ ಗಳಿಸಬೇಕಿದ್ದ ಮೊತ್ತಕ್ಕಿಂತ 2 ರನ್ ಹಿಂದಿತ್ತು. ಈ ಸಮಯದಲ್ಲಿ ಬೌಂಡರಿ ಗೆರೆ ಬಳಿಯಿಂದ ಟ್ರಾಟ್ ಆಟದ ವೇಗವನ್ನು ಇಳಿಸಲು ಆಟಗಾರರಿಗೆ ಸೂಚಿಸಿದರು. ಸ್ಲಿಪ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ನೈಬ್ ತಕ್ಷಣ ತಮ್ಮ ತೊಡೆಯ ಹಿಂಭಾಗವನ್ನು ಹಿಡಿದುಕೊಂಡು ನೆಲಕ್ಕೆ ಕುಸಿದರು. ತೀವ್ರ ನೋವಿನಿಂದ ಬಳಲುತ್ತಿರುವುದಾಗಿ ನಾಟಕ ಮಾಡಿ, ಫಿಸಿಯೋವನ್ನು ಮೈದಾನಕ್ಕೆ ಕರೆಸಿಕೊಂಡರು. ಇದರಿಂದ ಕೆಲ ಸಮಯ ವ್ಯರ್ಥವಾಯಿತು. ಆ ಬಳಿಕ ಮಳೆಯಿಂದಾಗಿ ಕೆಲ ಕಾಲ ಆಟ ಸ್ಥಗಿತಗೊಂಡಿತು. ಆಟ ಪುನಾರಂಭಗೊಂಡಾಗ ಮೈದಾನಕ್ಕೆ ಮರಳಿದ ನೈಬ್, ಬೌಲ್ ಮಾಡಿದ್ದಲ್ಲದೇ ತಮ್ಮ ತಂಡ ಗೆದ್ದ ಬಳಿಕ ಮೈದಾನದ ತುಂಬಾ ಓಡಿ ಸಂಭ್ರಮಿಸಿದರು.