ವೆಸ್ಟ್‌ಇಂಡೀಸ್‌ ವಿರುದ್ಧ ಅ.2ರಿಂದ ತವರಿನಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಗುರುವಾರ ಭಾರತ ತಂಡ ಪ್ರಕಟಗೊಂಡಿತು.

ದುಬೈ: ವೆಸ್ಟ್‌ಇಂಡೀಸ್‌ ವಿರುದ್ಧ ಅ.2ರಿಂದ ತವರಿನಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಗುರುವಾರ ಭಾರತ ತಂಡ ಪ್ರಕಟಗೊಂಡಿತು. ನಿರೀಕ್ಷೆಯಂತೆಯೇ ಯಾವುದೇ ಅಚ್ಚರಿಯ ಆಯ್ಕೆ ನಡೆಸದ ಬಿಸಿಸಿಐ, ಉಪನಾಯಕತ್ವ ಜವಾಬ್ದಾರಿಯನ್ನು ಹಿರಿಯ ಆಲ್ರೌಂಡರ್‌ ರವೀಂದ್ರ ಜಡೇಜಾಗೆ ವಹಿಸಿದೆ.

ಈಗಾಗಲೇ ಕೆಲ ಏಕದಿನ, ಟಿ20 ಪಂದ್ಯಗಳಲ್ಲಿ ಉಪನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಜಡೇಜಾ ಇದೇ ಮೊದಲ ಬಾರಿಗೆ ಟೆಸ್ಟ್‌ ತಂಡಕ್ಕೆ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ಇನ್ನು ಇಂಗ್ಲೆಂಡ್‌ ಪ್ರವಾಸದಲ್ಲಿ ತಂಡದಲ್ಲಿದ್ದ ಕರ್ನಾಟಕದ ಕರುಣ್‌ ನಾಯರ್‌, ಬಂಗಳಾದ ಅಭಿಮನ್ಯು ಈಶ್ವರನ್‌ರನ್ನು ಕೈಬಿಡಲಾಗಿದೆ. ದೇವ್‌ದತ್‌ ಪಡಿಕ್ಕಲ್‌ ತಂಡದಲ್ಲಿ ಸ್ಥಾನ ಪಡೆದಿದ್ದು, ಕೆ.ಎಲ್‌.ರಾಹುಲ್‌ ಹಾಗೂ ಪ್ರಸಿದ್ಧ್‌ ಕೃಷ್ಣ ತಂಡದಲ್ಲಿರುವ ಮತ್ತಿಬ್ಬರು ರಾಜ್ಯದ ಆಟಗಾರರು.

ವೇಗಿ ಜಸ್‌ಪ್ರೀತ್‌ ಬೂಮ್ರಾ ಎರಡೂ ಪಂದ್ಯಗಳಿಗೆ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮೂವರು ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ಗಳಾದ ಜಡೇಜಾ, ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಜೊತೆ ಮತ್ತೊಬ್ಬ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಸಹ ತಂಡದಲ್ಲಿದ್ದಾರೆ. ಬೂಮ್ರಾ, ಸಿರಾಜ್‌, ಪ್ರಸಿದ್ಧ್‌ ಜೊತೆಗೆ ವೇಗದ ಬೌಲಿಂಗ್‌ ಆಲ್ರೌಂಡರ್‌ ಆಗಿ ನಿತೀಶ್‌ ರೆಡ್ಡಿ ಸ್ಥಾನ ಪಡೆದಿದ್ದಾರೆ.

ರಿಷಭ್‌ ಪಂತ್‌ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಮೊದಲ ಆಯ್ಕೆಯ ವಿಕೆಟ್ ಕೀಪರ್‌ ಆಗಿ ಧೃವ್‌ ಜುರೆಲ್‌ ತಂಡದಲ್ಲಿದ್ದಾರೆ. ಎನ್‌.ಜಗದೀಶನ್‌ ಮೀಸಲು ಕೀಪರ್‌ ಆಗಿ ಸ್ಥಾನ ಪಡೆದಿದ್ದಾರೆ.

ಅ.2ರಿಂದ ಮೊದಲ ಟೆಸ್ಟ್‌ ಅಹಮದಾಬಾದ್‌ನಲ್ಲಿ ನಡೆಯಲಿದ್ದು, 2ನೇ ಪಂದ್ಯ ಅ.10ರಂದು ಆರಂಭಗೊಳ್ಳಲಿರುವ 2ನೇ ಪಂದ್ಯಕ್ಕೆ ನವದೆಹಲಿ ಆತಿಥ್ಯ ವಹಿಸಲಿದೆ.

ತಂಡ: ಶುಭ್‌ಮನ್‌ ಗಿಲ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಕೆ.ಎಲ್‌.ರಾಹುಲ್‌, ಸಾಯಿ ಸುದರ್ಶನ್‌, ದೇವದತ್‌ ಪಡಿಕ್ಕಲ್‌, ಧೃವ್‌ ಜುರೆಲ್‌, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಅಕ್ಷರ್‌ ಪಟೇಲ್‌, ನಿತೀಶ್‌ ರೆಡ್ಡಿ, ಎನ್‌.ಜಗದೀಶನ್‌, ಮೊಹಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಕುಲ್ದೀಪ್‌ ಯಾದವ್‌.

ಕರುಣ್‌ಗೆ ಬಾಗಿಲು ಬಂದ್‌?

8 ವರ್ಷ ಬಳಿಕ ಭಾರತ ತಂಡಕ್ಕೆ ಆಯ್ಕೆಯಾಗಿ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ಕರುಣ್‌ ನಾಯರ್‌, ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. 4 ಟೆಸ್ಟ್‌ಗಳ 8 ಇನ್ನಿಂಗ್ಸ್‌ಗಳಲ್ಲಿ ಕೇವಲ 205 ರನ್‌ ಗಳಿಸಿದ್ದರು. ಹೀಗಾಗಿ ಅವರನ್ನು ವಿಂಡೀಸ್‌ ವಿರುದ್ಧದ ಸರಣಿಗೆ ಪರಿಗಣಿಸಿಲ್ಲ. ಕರುಣ್‌ಗೆ ಭಾರತ ತಂಡದ ಬಾಗಿಲು ಬಂದ್‌ ಆಗಿದ್ದು, ಮತ್ತೆ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

ಈ ಬಗ್ಗೆ ಗುರುವಾದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌, ‘ಇಂಗ್ಲೆಂಡ್‌ನಲ್ಲಿ ಕರುಣ್‌ರಿಂದ ಹೆಚ್ಚಿನ ನಿರೀಕ್ಷೆ ಇತ್ತು. ನಿರೀಕ್ಷೆ ಉಳಿಸಿಕೊಳ್ಳದ ಕಾರಣದಿಂದಾಗಿಯೇ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದರು.