ಸಾರಾಂಶ
ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಮತ್ತೆ ಸೋಲು. ಯು.ಪಿ.ಯೋಧಾಸ್ ವಿರುದ್ಧ 33-34 ಅಂಕಗಳಲ್ಲಿ ವೀರೋಚಿತ ಸೋಲುಂಡ ಬುಲ್ಸ್‌ಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿತ.
ನೋಯ್ಡಾ: 10ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಜಯದ ಹೊಸ್ತಿಲಲ್ಲಿ ಎಡವಿದೆ. ಯು.ಪಿ.ಯೋಧಾಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಬುಲ್ಸ್‌ಗೆ 33-34 ಅಂಕಗಳ ವೀರೋಚಿತ ಸೋಲು ಎದುರಾಯಿತು. ಈ ಆವೃತ್ತಿಯಲ್ಲಿ ತಂಡಕ್ಕಿದು 9 ಪಂದ್ಯಗಳಲ್ಲಿ 6ನೇ ಸೋಲು.
ಮೊದಲಾರ್ಧದ ಮುಕ್ತಾಯಕ್ಕೆ 13-15ರ ಹಿನ್ನಡೆ ಅನುಭವಿಸಿದ್ದ ಬುಲ್ಸ್, ದ್ವಿತೀಯಾರ್ಧದ ಆರಂಭದಲ್ಲೇ ಆಲೌಟ್ ಆಯಿತು. ಇದರಿಂದಾಗಿ ಅಂತರ 14-18ಕ್ಕೆ ಹೆಚ್ಚಿತು. ಬಳಿಕ 37ನೇ ನಿಮಿಷದಲ್ಲಿ ಮತ್ತೊಮ್ಮೆ ಆಲೌಟ್ ಆಗಿದ್ದರಿಂದ 26-33ರ ಹಿನ್ನಡೆ ಕಂಡ ಬುಲ್ಸ್‌ಗೆ ಯುವ ರೈಡರ್ ಸುಶೀಲ್ ಜಯದ ಆಸೆ ಮೂಡಿಸಿದರು. 35ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಅಂಕಣಕ್ಕೆ ಕಾಲಿಟ್ಟ ಸುಶೀಲ್, 8 ರೈಡ್ ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪ್ರಮುಖ ರೈಡರ್‌ಗಳಾದ ಭರತ್ ಹಾಗೂ ವಿಕಾಸ್ ಖಂಡೋಲಾ ಅವರ ವೈಫಲ್ಯ, ಡಿಫೆಂಡರ್‌ಗಳ ಸಾಧಾರಣ ಆಟ ಸೋಲಿಗೆ ಪ್ರಮುಖ ಕಾರಣ ಎನಿಸಿತು. ಯೋಧಾಸ್‌ಗೆ ನಾಯಕ ಪ್ರದೀಪ್ ನರ್ವಾಲ್ ನೆರವಾದರು. ಲೀಗ್ ಇತಿಹಾಸದಲ್ಲೇ ಅತಿಹೆಚ್ಚು ಅಂಕ ಗಳಿಸಿದ ದಾಖಲೆ ಹೊಂದಿರುವ ಪ್ರದೀಪ್, ಪಂದ್ಯದಲ್ಲಿ 10 ಅಂಕ ಗಳಿಸಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಜಯ ಯೋಧಾಸ್ ಪಡೆಯನ್ನು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿಸಿತು. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಪಾಟ್ನಾ 46-33 ಅಂಕಗಳ ಗೆಲುವು ಪಡೆಯಿತು. ಇಂದಿನ ಪಂದ್ಯಗಳು: ಟೈಟಾನ್ಸ್-ಮುಂಬಾ, ರಾತ್ರಿ 8ಕ್ಕೆ, ಯೋಧಾಸ್-ಡೆಲ್ಲಿ, ರಾತ್ರಿ 9ಕ್ಕೆ