ಫುಟ್ಬಾಲ್‌ ಸ್ಟೇಡಿಯಂ ಅವ್ಯವಸ್ಥೆ ಬಗ್ಗೆ ಆಟಗಾರರ ಪೋಷಕರು ಕಿಡಿ!

| Published : Aug 21 2024, 12:31 AM IST

ಸಾರಾಂಶ

ಸಮಸ್ಯೆಗಳ ಆಗರವಾಗಿದೆ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯ ಸ್ಟೇಡಿಯಂ. ಶೌಚಾಲಯ ವ್ಯವಸ್ಥೆ ಸರಿಯಿಲ್ಲದೆ ಆಟಗಾರರ ಪರದಾಟ. ಕೆಎಸ್‌ಎಫ್‌ಎಗೆ ಆಟಗಾರರ ಹಿಡಿಶಾಪ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಮಸ್ಯೆಗಳ ಆಗರವಾಗಿರುವ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗಳ ಬಗ್ಗೆ ಆಟಗಾರರು, ಅವರ ಪೋಷಕರು ಕಿಡಿಕಾಡುತ್ತಿದ್ದಾರೆ. ‘ಒದ್ದರೆ ಬೀಳುವಂತಿದೆ ಫುಟ್ಬಾಲ್‌ ಸ್ಟೇಡಿಯಂ’ ಎನ್ನುವ ತಲೆಬರಹದಡಿ ‘ಕನ್ನಡಪ್ರಭ’ ಆ.19ರಂದು ಪ್ರಕಟಿಸಿದ್ದ ವಿಶೇಷ ವರದಿಯ ಬೆನ್ನಲ್ಲೇ, ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವಂತೆ ಕೆಎಸ್‌ಎಫ್‌ಎ ಮೇಲೆ ಒತ್ತಡ ಹೇರಲು ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಎಸ್‌ಎಫ್‌ಎ ಅಧ್ಯಕ್ಷರ ಜೊತೆ ಮಂಗಳವಾರ ಸಭೆ ನಡೆಸಲು ನೂರಾರು ಪೋಷಕರು ನಿರ್ಧರಿಸಿದ್ದರು. ಆದರೆ, ಸಭೆ ನಡೆಯಲಿಲ್ಲ. ಬರುವ ಭಾನುವಾರ ಸಭೆ ನಡೆಸುವುದಾಗಿ ಅಧ್ಯಕ್ಷರು, ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇತ್ತೀಚೆಗೆ ನಡೆದಿದ್ದ ರಾಜ್ಯ ಜೂನಿಯರ್‌ ಹಾಗೂ ಸಬ್‌-ಜೂನಿಯರ್‌ ತಂಡಗಳಿಗೆ ಆಯ್ಕೆ ಪ್ರಕ್ರಿಯೆ ವೇಳೆ 500ಕ್ಕೂ ಹೆಚ್ಚು ಮಕ್ಕಳು ಹಾಗೂ ಅಷ್ಟೇ ಸಂಖ್ಯೆಯ ಪೋಷಕರು ಬೆಂಗಳೂರಿನ ಅಶೋಕನಗರದಲ್ಲಿರುವ ಕೆಎಸ್‌ಎಫ್‌ಎ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಸೇರಿದ್ದರು. ಕ್ರೀಡಾಂಗಣದಲ್ಲಿನ ಕಸದ ರಾಶಿ, ದುರ್ನಾತ ಹೊಡೆಯುತ್ತಿದ್ದ ಶೌಚಾಲಯಗಳಿಂದಾಗಿ ಮಕ್ಕಳು, ಪೋಷಕರು ಪರದಾಡಿದ್ದರು. ಸೂಕ್ತ ವ್ಯವಸ್ಥೆಗಳಿಲ್ಲದೆ ಕೆಎಸ್‌ಎಫ್‌ಎಗೆ ಹಿಡಿಶಾಪ ಹಾಕಿದ್ದ ಪೋಷಕರು, ತಮ್ಮ ಮಕ್ಕಳನ್ನು ಈ ಕ್ರೀಡಾಂಗಣಕ್ಕೆ ಕರೆದು ತಂದಿದ್ದಕ್ಕೆ ಬೇಸರಗೊಂಡಿದ್ದರು.