ಕಳಪೆ ಆಟವಾಡಿ ವಿಶ್ವಕಪ್‌ನಿಂದ ಔಟ್‌: ಪಾಕ್‌ ಆಟಗಾರರ ಸಂಬಳ ಕಟ್‌?

| Published : Jun 16 2024, 01:47 AM IST / Updated: Jun 16 2024, 04:30 AM IST

ಕಳಪೆ ಆಟವಾಡಿ ವಿಶ್ವಕಪ್‌ನಿಂದ ಔಟ್‌: ಪಾಕ್‌ ಆಟಗಾರರ ಸಂಬಳ ಕಟ್‌?
Share this Article
  • FB
  • TW
  • Linkdin
  • Email

ಸಾರಾಂಶ

ಸಂಭಾವನೆ ಕಡಿತಗೊಳಿಸಲು ಮಾಜಿ ಆಟಗಾರರು, ಪಿಸಿಬಿ ಸದಸ್ಯರ ಸಲಹೆ. ಆಟಗಾರರಿಗೆ ನೀಡಲಾಗಿರುವ ಕೇಂದ್ರೀಯ ಗುತ್ತಿಗೆಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ.

ಲಾಹೋರ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ, ಗುಂಪು ಹಂತದಲ್ಲೇ ಪಾಕಿಸ್ತಾನ ತಂಡ ಹೊರಬಿದ್ದಿದ್ದಕ್ಕೆ ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದ್ದು, ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

 ಮೂಲಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪಿಸಿಬಿ ಶೀಘ್ರವೇ ಸಭೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದ್ದು, ಆಟಗಾರರಿಗೆ ನೀಡಲಾಗಿರುವ ಕೇಂದ್ರೀಯ ಗುತ್ತಿಗೆಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಪಾಕಿಸ್ತಾನ ಟ್ರೋಫಿ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಯುಎಸ್‌ ಡಾಲರ್‌(83 ಲಕ್ಷ ರು.) ನೀಡುವುದಾಗಿ ಪಿಸಿಬಿ ಘೋಷಿಸಿತ್ತು. ಆದರೆ ಈಗ ಸಂಬಳವನ್ನೇ ಕಡಿತಗೊಳಿಸಲು ಮುಂದಾಗಿದೆ.

ಪಾಕ್‌ ತಂಡದಲ್ಲಿ 3 ಬಣ!

ತಂಡದೊಳಗಿನ ಬಣ ರಾಜಕೀಯವೇ ಈ ಬಾರಿ ಪಾಕ್‌ನ ವಿಶ್ವಕಪ್‌ ಸೋಲಿಗೆ ಕಾರಣ ಎಂದು ವರದಿಯಾಗಿದೆ. ತಂಡದಲ್ಲಿ ಬಣಗಳಿರುವ ಬಗ್ಗೆ ಪಿಸಿಬಿ ಮೂಲಗಳಿಂದಲೇ ತಿಳಿದುಬಂದಿದ್ದು, ಇದರಿಂದಾಗಿ ಆಟಗಾರರ ನಡುವೆ ಸಮನ್ವಯತೆ ಇರಲಿಲ್ಲ ಎನ್ನಲಾಗಿದೆ. 

ಏಕದಿನ ವಿಶ್ವಕಪ್‌ ಬಳಿಕ ಬಾಬರ್ ಆಜಂ ನಾಯಕತ್ವ ತೊರೆದಿದ್ದರು. ಹೀಗಾಗಿ ಶಾಹೀನ್‌ ಅಫ್ರಿದಿಯನ್ನು ಟಿ20 ನಾಯಕನಾಗಿ ನೇಮಿಸಲಾಗಿತ್ತು. ಆದರೆ ಟಿ20 ವಿಶ್ವಕಪ್‌ಗೂ ಮುನ್ನ ಆಜಂರನ್ನೇ ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಇದೇ ಕಾರಣಕ್ಕೆ ತಂಡದಲ್ಲಿ ಆಜಂ, ಶಾಹೀನ್‌ ಹಾಗೂ ರಿಜ್ವಾನ್‌ರ 3 ಬಣಗಳು ಸೃಷ್ಟಿಯಾಗಿವೆ ಎಂದು ಮೂಲಗಳು ತಿಳಿಸಿದೆ.