ಎಲೈಸಿ ಪೆರ್ರಿ ಸ್ಫೋಟಕ ಆಟ: 2ನೇ ಟಿ20ಯಲ್ಲಿ ಆಸೀಸ್‌ ವಿರುದ್ಧ ಭಾರತಕ್ಕೆ ಸೋಲು

| Published : Jan 08 2024, 01:45 AM IST

ಎಲೈಸಿ ಪೆರ್ರಿ ಸ್ಫೋಟಕ ಆಟ: 2ನೇ ಟಿ20ಯಲ್ಲಿ ಆಸೀಸ್‌ ವಿರುದ್ಧ ಭಾರತಕ್ಕೆ ಸೋಲು
Share this Article
  • FB
  • TW
  • Linkdin
  • Email

ಸಾರಾಂಶ

2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್‌ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. 300ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ತಾರಾ ಆಲ್ರೌಂಡರ್‌ ಎಲೈಸ್ರಿ ಪೆರ್ರಿ ಸ್ಫೋಟಕ ಆಟವಾಡಿ ಆಸ್ಟ್ರೇಲಿಯಾವನ್ನು ಗೆಲ್ಲಿಸಿದರು.

ನವಿ ಮುಂಬೈ: ಎಲೈಸ್ರಿ ಪೆರ್ರಿ ತಮ್ಮ 300ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಆಟವಾಡಿ, ಭಾರತ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 6 ವಿಕೆಟ್‌ ಗೆಲುವು ತಂದುಕೊಟ್ಟರು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, ಜ.9ರಂದು ನಡೆಯಲಿರುವ 3ನೇ ಪಂದ್ಯ ಸರಣಿ ವಿಜೇತರನ್ನು ನಿರ್ಧರಿಸಲಿದೆ.ಗೆಲ್ಲಲು 131 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ, ಕೊನೆಯ 4 ಓವರಲ್ಲಿ 32 ರನ್‌ ಬೇಕಿದ್ದಾಗ, ಪೆರ್ರಿ 21 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 34 ರನ್‌ ಸಿಡಿಸಿ, ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.ಮೊದಲು ಬ್ಯಾಟ್‌ ಮಾಡಲು ಇಳಿಸಲ್ಪಟ್ಟ ಭಾರತ 20 ಓವರಲ್ಲಿ ಗಳಿಸಿದ್ದು 8 ವಿಕೆಟ್‌ಗೆ ಕೇವಲ 130 ರನ್‌. 54 ರನ್‌ಗೆ ಸ್ಮೃತಿ, ಶಫಾಲಿ, ಜೆಮಿಮಾ, ಹರ್ಮನ್‌ಪ್ರೀತ್‌ರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ದೀಪ್ತಿ ಶರ್ಮಾ (30), ರಿಚಾ ಘೋಷ್‌ (23) ಆಸರೆಯಾದರು. ಆದರೂ, ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ವಿಫಲವಾಯಿತು.ಅಲೀಸಾ ಹೀಲಿ (26), ಬೆಥ್‌ ಮೂನಿ (20) ಮೊದಲ ವಿಕೆಟ್‌ಗೆ 51 ರನ್‌ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರೂ, ಪೆರ್ರಿಯ ಇನ್ನಿಂಗ್ಸ್‌ ಆಸೀಸ್‌ಗೆ ಗೆಲುವು ತಂದುಕೊಟ್ಟಿತು.ಸ್ಕೋರ್‌: ಭಾರತ 20 ಓವರಲ್ಲಿ 130/8 (ದೀಪ್ತಿ 30, ರಿಚಾ 23, ಜಾರ್ಜಿಯಾ 2-17), ಆಸ್ಟ್ರೇಲಿಯಾ 19 ಓವರಲ್ಲಿ 133/4 (ಪೆರ್ರಿ 34, ಅಲೀಸಾ 26, ದೀಪ್ತಿ 2-22)