ಸಾರಾಂಶ
ಕ್ಯಾನ್‌ಬೆರಾ: ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡದ ವಿರುದ್ಧದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದೆ. ಇತ್ತಂಡಗಳ ನಡುವೆ 2 ದಿನಗಳ ಪಂದ್ಯ ನಿಗದಿಯಾಗಿತ್ತು. ಶನಿವಾರ ಮಳೆಯಿಂದಾಗಿ ದಿನದಾಟ ರದ್ದುಗೊಂಡಿತ್ತು.
ಭಾನುವಾರವೂ ಮಳೆ ಅಡ್ಡಿಪಡಿಸಿದ ಕಾರಣ ತಲಾ 46 ಓವರ್ ಪಂದ್ಯ ನಡೆಸಲಾಯಿತು. ಮೊದಲು ಬ್ಯಾಟ್ ಮಾಡಿದ ಪ್ರೈಮ್ ಮಿನಿಸ್ಟರ್ಸ್ ತಂಡ 43.2 ಓವರಲ್ಲಿ 240ಕ್ಕೆ ಆಲೌಟ್ ಆಯಿತು. ಸ್ಯಾಮ್ ಕೊನ್ಸ್‌ಟಸ್ 107 ರನ್ ಗಳಿಸಿದರು.
ಹರ್ಷಿತ್ ರಾಣಾ 4, ಆಕಾಶ್‌ದೀಪ್ 2 ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಭಾರತ ಪೂರ್ತಿ 46 ಓವರ್ ಬ್ಯಾಟ್ ಮಾಡಿ 5 ವಿಕೆಟ್‌ಗೆ 257 ರನ್ ಗಳಿಸಿತು. ಫಿಟ್ನೆಸ್ ಸಾಬೀತುಪಡಿಸಿದ ಶುಭ್‌ಮನ್ ಗಿಲ್ 50 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 45, ನಿತೀಶ್ ರೆಡ್ಡಿ 42, ವಾಷಿಂಗ್ಟನ್ ಸುಂದರ್ 42, ಕೆ.ಎಲ್.ರಾಹುಲ್ 27, ಜಡೇಜಾ ರನ್ ಬಾರಿಸಿದರು.
5 ವಿಕೆಟ್ ಕಳೆದುಕೊಂಡ್ರೂ 6 ವಿಕೆಟ್ ಗೆಲುವು ಯಾಕೆ?
ಪಂದ್ಯದಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿತು. ಆದರೆ ಸಿಕ್ಕಿದ್ದು 6 ವಿಕೆಟ್ ಜಯ. ಯಾಕೆಂದರೆ, ಭಾರತ 42.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲೇ 241 ರನ್ ಗುರಿ ತಲುಪಿತ್ತು. ಆದರೆ ಅಭ್ಯಾಸ ಪಂದ್ಯವಾದ ಕಾರಣ ಭಾರತ ಪೂರ್ಣ 46 ಓವರ್ ಬ್ಯಾಟ್ ಮಾಡಿ 5 ವಿಕೆಟ್‌ಗೆ 257 ರನ್ ಗಳಿಸಿತು. ನಿಗದಿತ ಗುರಿ ತಲುಪಿದಾಗ 4 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಕಾರಣ ಭಾರತಕ್ಕೆ 6 ವಿಕೆಟ್ ಜಯ ಎಂದು ಘೋಷಿಸಲಾಯಿತು.
2ನೇ ಟೆಸ್ಟ್‌ನಲ್ಲಿ ರೋಹಿತ್ 4ನೇ ಕ್ರಮಾಂಕದಲ್ಲಿ ಆಟ?
ಪಂದ್ಯದಲ್ಲಿ ರೋಹಿತ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 3 ರನ್ ಗಳಿಸಿದರು. ಸಾಮಾನ್ಯವಾಗಿ ರೋಹಿತ್ ಆರಂಭಿಕನಾಗಿ ಆಡುತ್ತಾರೆ. ಆದರೆ ಅವರ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಮೊದಲ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು, ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ 2ನೇ ಟೆಸ್ಟ್‌ನಲ್ಲೂ ರಾಹುಲ್‌ರನ್ನೇ ಆರಂಭಿಕನಾಗಿ ಆಡಿಸಿ, ರೋಹಿತ್‌ರನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ತಂಡದ ಆಡಳಿತ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಅಭ್ಯಾಸದ ವೇಳೆ 4ನೇ ಕ್ರಮಾಂಕದಲ್ಲಿ ಆಡಿಸಲಾಗಿದೆ ಎಂದು ಹೇಳಲಾಗುತ್ತಿದೆ.